ಮಡಿಕೇರಿ, ಅ. ೧: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯದ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಹಾಗೂ ಭಾರತೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ರಾಜ್ಯ ಕಚೇರಿ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ತಾ. ೬ ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ಜೇನುಕೃಷಿಕರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರು ಹಾಗೂ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚಾರೆಡ್ಡಿ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವು ರಾಜ್ಯದ ವಿವಿಧ ಭಾಗಗಳ ಪ್ರಗತಿಪರ ಜೇನುಕೃಷಿಕರನ್ನು ಒಂದೆಡೆ ಸೇರಿಸಿ, ಜೇನುಕೃಷಿಯ ಸವಾಲುಗಳು, ಪರಿಹಾರೋಪಾಯಗಳು, ನೂತನ ತಂತ್ರಜ್ಞಾನಗಳು ಹಾಗೂ ಜೇನುಕುಟುಂಬಗಳಲ್ಲಿ ಕಂಡುಬರುವ ಸಣ್ಣ ದುಂಬಿಯ (Smಚಿಟಟ ಊive ಃeeಣಟe) ನಿರ್ವಹಣೆ ಕುರಿತು ಸುದೀರ್ಘ ಚರ್ಚೆ ಮತ್ತು ಮಾಹಿತಿ ವಿನಿಮಯಕ್ಕೆ ವೇದಿಕೆಯಾಗಲಿದೆ. ಜೊತೆಗೆ, ಜೇನುಕೃಷಿಕರು ಮತ್ತು ಜೇನು ಉತ್ಪನ್ನಗಳ ವ್ಯಾಪಾರೋದ್ಯಮಿಗಳ ನಡುವೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಜೇನುಕೃಷಿಯನ್ನು ಲಾಭದಾಯಕ ಉದ್ಯಮವಾಗಿಸುವ ಉದ್ದೇಶವನ್ನು ಹೊಂದಿದೆ ಎಂದರು.

ಕಾರ್ಯಕ್ರಮವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯದ ಕುಲಪತಿಗಳಾದ ಡಾ. ಕೆ.ಸಿ. ನಾರಾಯಣಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಜಿ.ಎಂ. ದೇವಗಿರಿ, ವಿಶೇಷ ಆಹ್ವಾನಿತರಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ರಾಜ್ಯ ನಿರ್ದೇಶಕ ಡಾ. ಮೋಹನರಾವ್ ಭಾಗವಹಿಸಲಿದ್ದಾರೆ. ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ರಾಮಚಂದ್ರ ಸಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭ ಜೇನುಕೃಷಿಯಲ್ಲಿ ಸಾಧನೆ ಮಾಡಿದ ಕೃಷಿಕರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೨೦೦ ಪ್ರಗತಿಪರ ಜೇನುಕೃಷಿಕರು ಭಾಗವಹಿಸುವ ನಿರೀಕ್ಷೆಯಿದ್ದು, ಕೊಡಗಿನ ಜೇನುಕೃಷಿಕರು, ಆಸಕ್ತರು ಹಾಗೂ ವ್ಯಾಪಾರೋದ್ಯಮಿಗಳು ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವಂತೆ ಕೋರಿದರು.

ಗೋಷ್ಠಿಯಲ್ಲಿ ವಿಸ್ತರಣಾ ಶಿಕ್ಷಣ ಘಟಕದ ಸಹಪ್ರಾದ್ಯಾಪಕ ಡಾ. ಹೇಮಂತ್ ಕುಮಾರ್, ಡಾ. ಲತಾ ಹೆಚ್.ಸಿ. ಹಾಜರಿದ್ದರು.