ಮಡಿಕೇರಿ, ಅ. ೧: ಅರೆಕಾಡು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ಅಂಗವಾಗಿ ಅರಿವು ಕಾರ್ಯಕ್ರಮ, ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ನೋಂದಣಿ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ಅರ್ಹ ಫಲಾನುಭವಿಗಳು ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ಪೌಷ್ಟಿಕಾಂಶದ ಕೊರತೆ ಮತ್ತು ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಪೋಷಣ್ ಮಾಸಾಚರಣೆಗೆ ಮಹತ್ವ ನೀಡಲಾಗುತ್ತಿದೆ. ಮಕ್ಕಳಿಗೆ ಸ್ಥಳೀಯವಾಗಿ ದೊರೆಯುವ ಪೌಷ್ಟಿಕ ಆಹಾರ ನೀಡಬೇಕು ಹಾಗೂ ಜಂಕ್ ಫುಡ್‌ನಿಂದ ದೂರವಿಡಬೇಕು ಎಂದು ಸಲಹೆ ನೀಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮೇಲ್ವಿಚಾರಕಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿಯೂ ಕಾರ್ಯರೂಪಕ್ಕೆ ತರುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿದರು.

ಕ್ಷಯರೋಗಿಗಳಿಗೆ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಪೌಷ್ಟಿಕ ಆಹಾರಕ್ಕಾಗಿ ಸರ್ಕಾರದಿಂದ ಮಾಸಿಕ ಒಂದು ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು. ಸಮುದಾಯ ಆರೋಗ್ಯ ಅಧಿಕಾರಿ ಪುಷ್ಪ ವಾಡಿಗೆರೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆ ಹೆಚ್ಚುತ್ತಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಬೆಳಗಿನ ಉಪಾಹಾರವನ್ನು ಪೌಷ್ಟಿಕವಾಗಿ ಹಾಗೂ ಸಮರ್ಪಕವಾಗಿ ಸೇವಿಸಿ, ಮಧ್ಯಾಹ್ನ ಸಮತೋಲನ ಆಹಾರ ತೆಗೆದುಕೊಂಡು, ರಾತ್ರಿ ಹಗುರವಾದ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು. ನಾರಿನಂಶ, ಕಬ್ಬಿಣಾಂಶ, ವಿಟಮಿನ್‌ಗಳು ಹಾಗೂ ಪ್ರೋಟೀನ್‌ಯುಕ್ತ ಸಮತೋಲನ ಆಹಾರ ಸೇವಿಸುವಂತೆ ಕರೆ ನೀಡಿದರು. ಮರಗೋಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಅರೆಕಾಡು ಗ್ರಾಮದ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಪುಷ್ಪ ಪ್ರಾರ್ಥಿಸಿದರು. ಹರಿಣಾಕ್ಷಿ ನಿರೂಪಿಸಿದರು. ಅನಿಲ ಸ್ವಾಗತಿಸಿದರು. ಸವಿತಾ ವಂದಿಸಿದರು.