ಒAದು ಬೆಂಕಿಯ ಉರಿ

ಒಂದು ಮರೆಯಲಾಗದ ಘಮ

ಕೊಡಗಿನ ಕಾಫಿ ಪರಂಪರೆಯೊAದರ ಜೀವಂತ ಕಥೆ.

ಒಂದು ಕಾಲವಿತ್ತು ಕಾಫಿ ಬೀಜಗಳು ಬೆಂಕಿಯ ಉರಿಯಲ್ಲಿ ನಿಧಾನವಾಗಿ ಹುರಿಯುತ್ತಿದ್ದವು. ಬೀಜಗಳ ಬಣ್ಣ ಬದಲಾಗುತ್ತಿದ್ದಂತೆ ಕಾಫಿಯ ಘಮವೂ ನಿಧಾನವಾಗಿ ಹೆಚ್ಚಾಗುತ್ತಿತ್ತು. ಹುರಿದ ಕಾಫಿ ಬೀಜದ ಪರಿಮಳ ಮನೆ-ಮನಗಳನ್ನು ಆವರಿಸುತ್ತಿದ್ದ ಆ ದಿನಗಳು ಇಂದು ನೆನಪುಗಳಾಗಿವೆ.

ಅದು ಆಧುನಿಕ ಕಾಫಿ ಹುರಿಯುವ ಯಂತ್ರಗಳ ಕಾಲವಲ್ಲ. ತಾಪಮಾನವನ್ನು ಅಳೆಯುವ ಸಾಧನಗಳಿಲ್ಲ, ಸಮಯವನ್ನು ನಿಖರವಾಗಿ ನಿಗದಿಪಡಿಸುವ ವ್ಯವಸ್ಥೆಯೂ ಇರಲಿಲ್ಲ. ಬೆಂಕಿಯ ಉರಿ, ಕಣ್ಣಿನ ಅಂದಾಜು ಮತ್ತು ಅನುಭವದ ಕೈಚಳಕವೇ ಕಾಫಿ ಹುರಿಯುವ ತಂತ್ರಜ್ಞಾನವಾಗಿತ್ತು.

ಗಾತ್ರದಲ್ಲಿ ಪುಟ್ಟದಾಗಿದ್ದರೂ, ಕಾಫಿ ಬೀಜಗಳನ್ನು ಹುರಿಯುತ್ತಿದ್ದ ಈ ಪುರಾತನ ಯಂತ್ರ ಕೊಡಗಿನ ಕಾಫಿ ಸಂಸ್ಕೃತಿಯ ಒಂದು ಅಪರೂಪದ ನೆನಪನ್ನು ತನ್ನೊಳಗೆ ಹೊತ್ತುನಿಂತಿದೆ.

ಪುಟ್ಟ ಯಂತ್ರದಲ್ಲಿ ಅಡಗಿದ್ದ ದೊಡ್ಡ ಕಥೆ

ಪುರಾತನ ಕಾಫಿ ಹುರಿಯುವ ಯಂತ್ರದ ವಿನ್ಯಾಸ ಸರಳ ವಾಗಿತ್ತು. ಯಂತ್ರದೊಳಗೆ ಕಾಫಿ ಬೀಜಗಳನ್ನು ಹಾಕಿ ಬೆಂಕಿಯ ಶಾಖಕ್ಕೆ ಒಡ್ಡಲಾಗುತ್ತಿತ್ತು. ಬೀಜಗಳು ಸುಡದಂತೆ ಮತ್ತು ಸಮವಾಗಿ ಹುರಿಯುವಂತೆ ನಿರಂತರವಾಗಿ ಗಮನಿಸಲಾಗುತ್ತಿತ್ತು.

ಹುರಿಯುವ ಪ್ರಕ್ರಿಯೆ ಮುಂದುವರಿದAತೆ ಕಾಫಿ ಬೀಜಗಳು ತಮ್ಮ ಮೂಲ ಬಣ್ಣವನ್ನು ಕಳೆದುಕೊಂಡು ನಿಧಾನವಾಗಿ ಕಂದು ಬಣ್ಣಕ್ಕೆ ತಿರುಗುತ್ತಿದ್ದವು. ಅದರೊಂದಿಗೆ ಕಾಫಿಯ ವಿಶಿಷ್ಟ ಪರಿಮಳವೂ ಹೊರಹೊಮ್ಮುತ್ತಿತ್ತು. ಸರಿಯಾದ ಹಂತದಲ್ಲಿ ಹುರಿದ ಬೀಜಗಳನ್ನು ಹೊರತೆಗೆದು ತಣ್ಣಗಾಗಿಸಲಾಗುತ್ತಿತ್ತು. ಅಲ್ಲಿಂದ ಕಾಫಿಯ ಮತ್ತೊಂದು ಪಯಣ ಆರಂಭವಾಗುತ್ತಿತ್ತು. ಹುರಿದ ಬೀಜಗಳನ್ನು ಸಾಂಪ್ರದಾಯಿಕ ರುಬ್ಬುವ ಸಾಧನದಲ್ಲಿ ಪುಡಿಮಾಡಿ ಕಾಫಿ ತಯಾರಿಸಲಾಗುತ್ತಿತ್ತು.

ತೋಟದಿಂದ ಕಾಫಿ ಕಪ್‌ವರೆಗೆ

ಕೊಡಗಿನ ಹಲವು ಕುಟುಂಬಗಳ ಬದುಕಿನಲ್ಲಿ ಕಾಫಿ ತೋಟಕ್ಕೆ ವಿಶೇಷ ಸ್ಥಾನವಿದೆ. ಕಾಫಿ ಕೊಯ್ಲಿನ ದಿನಗಳು ಒಂದು ರೀತಿಯ ಸಂಭ್ರಮವಾಗಿದ್ದರೆ, ಕಾಫಿ ಬೀಜಗಳನ್ನು ಸಂಸ್ಕರಿಸುವ ದಿನಗಳು ಮತ್ತೊಂದು ರೀತಿಯ ಅನುಭವ.

ಮನೆಯ ಬಳಕೆಗೆ ಬೇಕಾದ ಕಾಫಿಯನ್ನು ಸ್ವತಃ ಹುರಿದು, ರುಬ್ಬಿ ಬಳಸುವ ಪದ್ಧತಿಯೂ ಹಿಂದಿನ ದಿನಗಳಲ್ಲಿ ಕಂಡು ಬರುತ್ತಿತ್ತು. ಅಗತ್ಯವಿದ್ದಷ್ಟು ಕಾಫಿ ಬೀಜಗಳನ್ನು ಹುರಿದು ತಾಜಾ ಕಾಫಿ ಪುಡಿ ತಯಾರಿಸಲಾಗುತ್ತಿತ್ತು. ಬೆಳಗಿನ ಹೊತ್ತಿನಲ್ಲಿ ತಾಜಾ ಹುರಿದ ಕಾಫಿಯ ಘಮ ಮನೆಯೊಳಗೆ ಹರಡಿದಾಗ, ಕಾಫಿ ಕಪ್‌ಗಿಂತಲೂ ಮೊದಲು ಅದರ ಪರಿಮಳವೇ ಮನಸ್ಸನ್ನು ತಲುಪುತ್ತಿತ್ತು.

ಬೆಂಕಿಯ ಉರಿಯಲ್ಲಿ ಮೂಡುತ್ತಿದ್ದ ರುಚಿ

ಕಾಫಿ ಹುರಿಯುವ ಪ್ರಕ್ರಿಯೆಯಲ್ಲಿ ಬೆಂಕಿಯ ಉಷ್ಣತೆಯ ನಿಯಂತ್ರಣ ಬಹಳ ಮುಖ್ಯವಾಗಿತ್ತು. ಹೆಚ್ಚು ಉರಿ ಇದ್ದರೆ ಬೀಜಗಳು ಸುಡುವ ಅಪಾಯ; ಕಡಿಮೆ ಉರಿ ಇದ್ದರೆ ಸಮರ್ಪಕವಾಗಿ ಹುರಿಯಲು ಹೆಚ್ಚು ಸಮಯ ಬೇಕಾಗುತ್ತಿತ್ತು.

ಹೀಗಾಗಿ ಕಾಫಿ ಹುರಿಯುತ್ತಿದ್ದವರ ಅನುಭವವೇ ಮುಖ್ಯವಾಗಿತ್ತು. ಬೀಜದ ಬಣ್ಣ, ಅದರ ಪರಿಮಳ ಮತ್ತು ಹುರಿಯುವಿಕೆಯ ಸ್ಥಿತಿಯನ್ನು ಗಮನಿಸಿ ಸರಿಯಾದ ಸಮಯದಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಲಾಗುತ್ತಿತ್ತು.

ಇಂದಿನ ತಂತ್ರಜ್ಞಾನದಲ್ಲಿ ಯಂತ್ರಗಳು ಈ ಕೆಲಸವನ್ನು ನಿಖರವಾಗಿ ನಿರ್ವಹಿಸುತ್ತವೆ. ಆದರೆ ಹಿಂದಿನ ಕಾಲದಲ್ಲಿ ಮನುಷ್ಯನ ಅನುಭವವೇ ಅಳತೆಗೋಲು.

ಆಧುನಿಕ ಯಂತ್ರಗಳ ನಡುವೆ ಮರೆಯಾದ ಪರಂಪರೆ

ಕಾಫಿ ಉದ್ಯಮ ಬೆಳೆದಂತೆ ಹುರಿಯುವ ವಿಧಾನಗಳಲ್ಲೂ ಬದಲಾವಣೆಗಳಾದವು. ದೊಡ್ಡ ಪ್ರಮಾಣದಲ್ಲಿ ಕಾಫಿ ಬೀಜಗಳನ್ನು ಹುರಿಯಬಲ್ಲ ಆಧುನಿಕ ಯಂತ್ರಗಳು ಬಳಕೆಗೆ ಬಂದವು. ತಾಪಮಾನ, ಸಮಯ ಮತ್ತು ಹುರಿಯುವಿಕೆಯ ಹಂತಗಳನ್ನು ನಿಖರವಾಗಿ ನಿಯಂತ್ರಿಸುವ ತಂತ್ರಜ್ಞಾನ ಕಾಫಿ ಸಂಸ್ಕರಣೆಗೆ ವೇಗ ನೀಡಿತು. ಇದರ ಪರಿಣಾಮವಾಗಿ ಮನೆಮಟ್ಟದಲ್ಲಿ ಬಳಸುತ್ತಿದ್ದ ಪುಟ್ಟ ಪುರಾತನ ಕಾಫಿ ಹುರಿಯುವ ಯಂತ್ರಗಳ ಬಳಕೆ ಕ್ರಮೇಣ ಕಡಿಮೆಯಾಯಿತು.

ಇಂದು ಇಂತಹ ಯಂತ್ರಗಳು ಅಪರೂಪವಾಗಿ ಮಾತ್ರ ಕಾಣಸಿಗುತ್ತವೆ. ಆದರೆ ಅವುಗಳ ಮಹತ್ವ ಅದರ ಗಾತ್ರದಲ್ಲಿಲ್ಲ; ಅವು ಹೇಳುವ ಕಥೆಯಲ್ಲಿದೆ.

ಕಾಫಿಯ ಇತಿಹಾಸದ ಜೀವಂತ ಸಾಕ್ಷಿ

ಒಂದು ಹಳೆಯ ಕಾಫಿ ಯಂತ್ರವನ್ನು ನೋಡಿದಾಗ ಅದು ಕೇವಲ ಕಬ್ಬಿಣದ ಉಪಕರಣವಾಗಿ ಕಾಣಬಹುದು. ಆದರೆ ಅದರ ಹಿಂದೆ ಕೊಡಗಿನ ಕಾಫಿ ಕೃಷಿಯ ಒಂದು ಕಾಲಘಟ್ಟವಿದೆ. ಕಾಫಿ ತೋಟದಲ್ಲಿ ದುಡಿದ ರೈತ, ಕಾಫಿ ಬೀಜಗಳನ್ನು ಸಂಸ್ಕರಿಸಿದ ಕುಟುಂಬ, ಬೆಂಕಿಯ ಉರಿಯಲ್ಲಿ ಬೀಜಗಳನ್ನು ಹುರಿದ ಕೈಗಳು ಮತ್ತು ಬೆಳಗಿನ ಕಾಫಿಯ ಘಮ ಇವೆಲ್ಲವನ್ನೂ ಈ ಪುಟ್ಟ ಯಂತ್ರ ನೆನಪಿಸುತ್ತದೆ.

ಹೀಗಾಗಿ ಇಂತಹ ಪುರಾತನ ಕಾಫಿ ಉಪಕರಣಗಳನ್ನು ಸಂರಕ್ಷಿಸು ವುದು ಕಾಫಿ ಇತಿಹಾಸದ ಒಂದು ಭಾಗವನ್ನು ಸಂರಕ್ಷಿಸುವುದಕ್ಕೆ ಸಮಾನ.

ಪರಂಪರೆ ಉಳಿಯಲಿ-ಘಮ ಮುಂದುವರಿಯಲಿ

ಅAತರರಾಷ್ಟಿçÃಯ ಕಾಫಿ ದಿನದ ಸಂದರ್ಭದಲ್ಲಿ ಕೊಡಗಿನ ಕಾಫಿಯ ಇಂದಿನ ಸಾಧನೆಗಳನ್ನು ಮಾತ್ರವಲ್ಲ, ಅದರ ಹಿಂದಿನ ಪರಂಪರೆಯನ್ನೂ ನೆನಪಿಸಿಕೊಳ್ಳಬೇಕಾಗಿದೆ.

ಹಳೆಯ ಕಾಫಿ ಹುರಿಯುವ ಯಂತ್ರಗಳು, ಕಾಫಿ ರುಬ್ಬುವ ಸಾಧನಗಳು, ಹಳೆಯ ಸಂಗ್ರಹಣಾ ಪಾತ್ರೆಗಳು ಮತ್ತು ಕಾಫಿ ಸಂಸ್ಕರಣೆಯ ಪರಿಕರಗಳನ್ನು ಸಂಗ್ರಹಿಸಿ ದಾಖಲಿಸುವ ಕಾರ್ಯ ನಡೆದರೆ, ಮುಂದಿನ ಪೀಳಿಗೆಗೆ ಕೊಡಗಿನ ಕಾಫಿ ಸಂಸ್ಕೃತಿಯ ಪಯಣವನ್ನು ಪರಿಚಯಿಸಲು ಸಾಧ್ಯವಾಗುತ್ತದೆ.

ಇಂದು ಕೊಡಗಿನ ಕಾಫಿ ದೇಶ-ವಿದೇಶಗಳ ಮಾರುಕಟ್ಟೆ ತಲುಪಿದೆ. ಕಾಫಿಯ ಗುಣಮಟ್ಟ, ಸಂಸ್ಕರಣೆ ಮತ್ತು ಹುರಿಯುವಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ತೆರೆದಿದೆ. ಆದರೆ ಈ ಹೊಸ ಪಯಣದ ಬೇರುಗಳು ಹಿಂದಿನ ತಲೆಮಾರುಗಳ ಸರಳ ವಿಧಾನಗಳಲ್ಲಿವೆ.

ಕಾಫಿಯ ಕಪ್ ಇಂದು ಆಧುನಿಕವಾಗಿರಬಹುದು; ಆದರೆ ಅದರ ಘಮದಲ್ಲಿ ಇನ್ನೂ ಕೊಡಗಿನ ಮಣ್ಣಿನ ನೆನಪು ಇದೆ.

-ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ