ಮೂರ್ನಾಡು, ಸೆ. ೨೯: ಶ್ರೀ ಗಜೇಂದ್ರ ಯುವಶಕ್ತಿ ಸಂಘದ ವತಿಯಿಂದ ಆಯೋಜಿಸಿದ್ದ ಗೌರಿ-ಗಣೇಶೋತ್ಸವದ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಕ್ರೀಡಾ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಸನ್ಮಾನಿಸಿ, ವಿಶೇಷಚೇತನ ಕುಟುಂಬಕ್ಕೆ ಗೃಹಬಳಕೆಯ ವಸ್ತುಗಳ ಕಿಟ್ ವಿತರಿಸಲಾಯಿತು.

ಮೂರ್ನಾಡು ಪಟ್ಟಣದ ನಾಪೋಕ್ಲು ರಸ್ತೆಯಲ್ಲಿ ರುವ ಹನುಮಾನ್ ಟ್ರೇಡರ್ಸ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಏಳು ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಶ್ರೀ ಗಜೇಂದ್ರ ಯುವಶಕ್ತಿ ಸಂಘವು ಗೌರಿ-ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾಗದೆ, ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಯುವಪೀಳಿಗೆಯಿಂದ ಇನ್ನಷ್ಟು ನಡೆಯಬೇಕು ಎಂದು ಆಶಿಸಿದರು. ಕಳೆದ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ನಫಿಷತುಲ್ ಮಿಶ್ರೀಯ, ಟಿ.ಎ. ಲಿಖಿತ, ಎ. ಅತೀರ ಹಾಗೂ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಹೆಚ್.ಪಿ. ಜನೀಷಾ ಬೋಜಮ್ಮ, ಬಿ.ಹೆಚ್. ಬೃಂದಾ ಮತ್ತು ಆರ್. ಪುಣ್ಯರೆಡ್ಡಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಧನ ವಿತರಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂರ್ನಾಡಿನ ರಾಷ್ಟಿçÃಯ ಹಾಕಿ ಕ್ರೀಡಾಪಟು ಎಂ. ಹರ್ಷಿತ್ ಕುಮಾರ್ ಹಾಗೂ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಲಮುರಿ ಗ್ರಾಮದ ಮುಳುಗು ತಜ್ಞ ಎಂ.ಆರ್. ಬಿಪಿನ್ ಅವರನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗಜೇಂದ್ರ ಯುವಶಕ್ತಿ ಸಂಘದ ಅಧ್ಯಕ್ಷ ಸಿ.ಪಿ. ಸುಬ್ರಮಣಿ ವಹಿಸಿದ್ದರು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ಹಾಗೂ ದಾನಿ ಬಾಚೆಟ್ಟಿರ ಕಮಲು ಮುದ್ದಯ್ಯ, ಗಣೇಶ ಮೂರ್ತಿ ದಾನಿ ಕಿಗ್ಗಾಲು ಗ್ರಾಮದ ಡಿ.ಟಿ. ಲೀಲಾ ಹಾಗೂ ಉದ್ಯಮಿ ಕಿರಣ್ ರಾಮಚಂದ್ರ ಉಪಸ್ಥಿತರಿದ್ದರು. ನವ್ಯ ಮಾನ್ಯ ಪ್ರಾರ್ಥಿಸಿದರು. ಶಿಕ್ಷಕ ರೋಶನ್ ಸ್ವಾಗತಿಸಿ, ವಂದಿಸಿದರು.