ಮಡಿಕೇರಿ, ಸೆ. ೨೭: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯುಷ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಕರಿಕೆ ಗ್ರಾಮದಲ್ಲಿ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮದ ಫಲಾನುಭವಿಗಳಿಗಾಗಿ ಪೋಷಣ್ ವಾಟಿಕಗಳಲ್ಲಿ ಬೆಳೆಯುವ ಉತ್ಪನ್ನಗಳು ಹಾಗೂ ಸ್ಥಳೀಯವಾಗಿ ದೊರೆಯುವ ಋತುಮಾನಿಕ ಆಹಾರ ಪ್ರದರ್ಶನಗಳನ್ನು ಪ್ರದರ್ಶಿಸಿ ಅವುಗಳನ್ನು ಕುಟುಂಬದ ದಿನನಿತ್ಯದ ಆಹಾರದಲ್ಲಿ ಮತ್ತು ಚಿಕ್ಕ ಮಕ್ಕಳ ಪೂರಕ ಆಹಾರದಲ್ಲಿ ನಿಯಮಿತವಾಗಿ ಬಳಸುವಂತೆ ಉತ್ತೇಜಿಸುವುದಕ್ಕಾಗಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಇದರಿಂದ ಶಿಶು ಮರಣ, ತಾಯಿ ಮರಣ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕು ಹಾಗೂ ಕರಿಕೆ ಗ್ರಾಮ ಪಂಚಾಯಿತಿಯನ್ನು ಶಿಶು ಮರಣ, ತಾಯಿ ಮರಣ ಮತ್ತು ಅಪೌಷ್ಟಿಕ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಿಳಿಸಿದರು.
ಕಾರ್ಯಕ್ರಮದ ಉತ್ತಮ ಆಯೋಜನೆ ಹಾಗೂ ಅತಿ ಹೆಚ್ಚು ಫಲಾನುಭವಿಗಳ ಪಾಲ್ಗೊಳ್ಳುವಿಕೆಯು ಅಂಗನವಾಡಿ ಕಾರ್ಯಕರ್ತೆಯರ ಉತ್ತಮ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಉಪ ನಿರ್ದೇಶಕರು ಪ್ರಶಂಶಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯರ್, ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, ಕಾರ್ಯಕ್ರಮದ ಉತ್ತಮ ಆಲೋಚನೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಉತ್ತಮ ಕರ್ತವ್ಯ ನಿಷ್ಠೆ, ಕೊರೊನಾದ ಸಮಯದಲ್ಲಿ ಅವರ ಕರ್ತವ್ಯವನ್ನು ಶ್ಲಾಘಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಪೋಷಣ್ ಮಾಸಾಚರಣೆಯ ಕುರಿತು ವಿವರವಾಗಿ ಮಾಹಿತಿಯನ್ನು ನೀಡಿದರು. ಕರಿಕೆ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಪಲ್ಲವಿ ಎಲ್ಲಾ ವಯೋಮಾನದವರಿಗೆ ಸಮತೋಲನ ಆಹಾರ ಮತ್ತು ವೈವಿಧ್ಯ ಆಹಾರವನ್ನು ಬಳಸುವ ನಿಟ್ಟಿನಲ್ಲಿ ಈ ದಿನ ವಿವಿಧ ರೀತಿಯ ಆಹಾರಗಳ ಪ್ರದರ್ಶನವನ್ನು ಮಾಡಿದ್ದೂ ಹಾಗೂ ಆಹಾರದ ಪಿರಮಿಡ್ ರಚನೆ ಮಾಡಿ ಅದರ ಮೂಲಕ ಪೌಷ್ಟಿಕ ಆಹಾರದ ಕುರಿತು ಮಾಹಿತಿಯನ್ನು ನೀಡಲಾಗುತ್ತಿದ್ದು, ಮಹಿಳೆಯರು ಜಾಗೃತರಾಗಿ ತಮ್ಮ ಹಾಗೂ ಕುಟುಂಬದವರ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳಲು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಂಗನವಾಡಿಯ ಮೂಲಕ ಅಂಗನವಾಡಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಫಲಾನುಭವಿಗಳ ಆರೋಗ್ಯ ಹಾಗೂ ಪೌಷ್ಟಿಕತಾ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಪೋಷಣ್ ಮಾಸಾಚರಣೆಯಲ್ಲಿ ಪ್ರಾಮುಖ್ಯತೆ ನೀಡಿತ್ತು. ಮಕ್ಕಳ ಪೋಷಕರು ಉತ್ತಮ ಪಾಲ್ಗೊಳ್ಳುವಿಕೆಯೊಂದಿಗೆ ಗ್ರಾಮದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಅಭಿವೃದ್ಧಿಗೆ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಅಭಿಲಾಶ್ ಸಾಂಕ್ರಾಮಿಕ ರೋಗಗಳ ಬಗ್ಗೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ೧೩ನೇ ಮೈಲು ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ಅವರು ೩೨ ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದು, ಇವರಿಗೆ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಉಪನಿರ್ದೇಶಕರ ಕಚೇರಿಯ ಜಯಂತಿ, ಕರಿಕೆ ಗ್ರಾಮ ಪಂಚಾಯಿತಿಗೆ ಸೇರಿದ ಎಲ್ಲಾ ಗ್ರಾಮದ ಫಲಾನುಭವಿಗಳು, ಗರ್ಭಿಣಿ ಬಾಣಂತಿಯರು, ಭಾಗಮಂಡಲ ವೃತ್ತದ ೩೦ ಗ್ರಾಮಕ್ಕೆ ಸಂಬAಧಿಸಿದ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತೆಯರು, ಪಿಹೆಚ್‌ಸಿಓ ಪಾಲ್ಗೊಂಡಿದ್ದರು.