ಕಣಿವೆ, ಸೆ. ೨೬: ಪ್ರತಿ ದಿನ ಮುಸ್ಸಂಜೆ ಆಗುತ್ತಲೇ ಭೂಕಂಪದ ಮಾದರಿಯಲ್ಲಿ ನಡುಗುವ ಭೂಮಿ.., ಮೊಬೈಲ್ ವೈಬ್ರೇಟ್ ಮೂಡ್ ತರಹ ಕೆಲ ಕ್ಷಣ ಒದರುವ ಮನೆಗಳ ಗೋಡೆಗಳು..., ಕೆಳಗುರುಳುವ ಅಡುಗೆ ಮನೆಯ ಪಾತ್ರೆಗಳು..., ಮನೆ ಬಿಟ್ಟು ಹೊರಗೆ ಓಡಿ ಬರುವ ಮಹಿಳೆಯರು...., ಎಲ್ಲೆಲ್ಲೂ ಬಿರುಕು ಬಿಟ್ಟ ಮನೆಗಳ ಗೋಡೆಗಳು..., ಇಂತಹ ಸನ್ನಿವೇಶ ಎಲ್ಲೂ ದೂರದಲ್ಲಿ ಇಲ್ಲ.
ತಾಲೂಕು ಕೇಂದ್ರ ಕುಶಾಲನಗರದಿಂದ ಕೇವಲ ೧೫ ಕಿಮೀ ದೂರದ ಚಿಕ್ಕನಾಯಕನ ಹೊಸಳ್ಳಿ ಎಂಬ ಗ್ರಾಮದಲ್ಲಿ ಪ್ರತಿ ನಿತ್ಯವೂ ಇಲ್ಲಿನ ನಿವಾಸಿಗಳು ಅನುಭವಿಸುವ ನರಕಯಾತನೆ. ನೆರೆಯ ಅರಕಲಗೂಡು ತಾಲೂಕಿನ ಗಡಿ ಅರಗಲ್ಲು ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರಂಭವಾಗಿರುವ ಕಲ್ಲುಕೋರೆಯಲ್ಲಿನ ಸ್ಪೋಟಕದಿಂದಾಗಿ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮಸ್ಥರು ಅಕ್ಷರಶಃ ನರಕ ಯಾತನೆಯಲ್ಲಿ ದಿನಕÀಳೆಯುತ್ತಿದ್ದಾರೆ.
ಕಲ್ಲು ಕೋರೆಯ ಕೂಗಳತೆ ದೂರದ ಆಸುಪಾಸಿನಲ್ಲಿ ಸುಮಾರು ೨೦ ಕ್ಕೂ ಹೆಚ್ಚಿನ ಮನೆಗಳಿದ್ದು, ಎಲ್ಲಾ ಮನೆಗಳಿಗೂ ಈ ಕಲ್ಲು ಕೋರೆಯಲ್ಲಿನ ಸ್ಫ್ಪೋಟಕ ಅಪಾರ ಹಾನಿ ಉಂಟುಮಾಡಿರುವುದಾಗಿ ಸ್ವತಃ ನಿವಾಸಿಗಳು ದೂರಿದ್ದಾರೆ. ಗ್ರಾಮದ ಕೃಷಿಕ ದಂಪತಿ ರಂಗಸ್ವಾಮಿ ಹಾಗೂ ಮೋಹಿನಿ ಅವರ ಕೊಟ್ಟಿಗೆ ಸುತ್ತಲೂ ಬಿರುಕು ಬಿಟ್ಟಿದ್ದು ಕುಸಿಯಲು ಕ್ಷಣಗಣನೆಯಲ್ಲಿದೆ.
ಆರ್ಸಿಸಿ ಮನೆಗಳು ಬಿರುಕು
ಗ್ರಾಮದ ಕೆಲವು ನಿವಾಸಿಗಳು ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಆರ್ ಸಿ ಸಿ ಮನೆಗಳ ಮೇಲೂ ಇಲ್ಲಿ ನಿತ್ಯವೂ ನಡೆಯುವ ಸ್ಪೋಟಕ ಬಹಳಷ್ಟು ಹಾನಿ ಮಾಡಿದೆ. ಅಂದರೆ ಮನೆಗಳ ಗೋಡೆಗಳು ಸುತ್ತಲೂ ಬಿರುಕು ಬಿಟ್ಟಿವೆ. ಭೂಮಿಯ ಅದರುವಿಕೆಯ ಆರ್ಭಟಕ್ಕೆ ಮನೆಯ ಅಡಿಪಾಯವೂ ಅಲುಗಾಡಿದ್ದು ಬಿರುಕು ಮೂಡಿಸಿದೆ. ನಾವು ಎಷ್ಟು ಹೇಳಿದರೂ ನಮ್ಮ ಮಾತಿಗೆ ಮನ್ನಣೆಯೇ ಇಲ್ಲ.
ಕೋರೆಯ ಸ್ಫೋಟಕದಿಂದ ಆಗುತ್ತಿರುವ ಮನೆಯ ಹಾನಿಯ ಕುರಿತು ಯಾರ ಬಳಿ ಪ್ರಶ್ನಿಸಬೇಕು. ಎಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂದು ಕೃಷಿ ಕಾರ್ಮಿಕ ದಂಪತಿ ಮೋಹಿನಿ ಹಾಗೂ ರಂಗಸ್ವಾಮಿ ಅಳಲು ತೋಡಿಕೊಳ್ಳುತ್ತಾರೆ. ನೆರೆ ಮನೆಯ ನಿವಾಸಿ ಕುಮಾರ ಹಾಗೂ ಈರಮ್ಮ ಅವರ ಮನೆಗಳ ಗೋಡೆಗಳು ಕೂಡ ಸುತ್ತಲೂ ಬಿರುಕು ಬಿಟ್ಟಿವೆ. ಗೀತಾ ಹಾಗೂ ವೀರಭದ್ರ ಅವರಿಗೆ ಸೇರಿದ ಮನೆಯ ಒಳ ಹಜಾರ ಬೆರಳು ಹಾಕಬಹುದಾದಷ್ಟು ಗಾತ್ರದಲ್ಲಿ ಬಿರುಕು ಬಿಟ್ಟಿದೆ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಜೊತೆಗೆ ಗೋಡೆಗಳು ಬಿರುಕಾಗಿವೆ.
ಗರ್ಭಿಣಿ ಹಾಗೂ ಮಕ್ಕಳಿಗೂ ಪರಿಣಾಮ
ಗ್ರಾಮದ ಕೃಷಿಕ ದಂಪತಿ ದೇವದಾಸ ಹಾಗೂ ಪಾರ್ವತಿ ಎಂಬವರ ಮನೆಯೂ ಅದೇ ಸ್ಥಿತಿ ಗತಿ. ಈ ನಿವಾಸಿಗಳು ಹೇಳುವಂತೆ ಪ್ರತಿ ದಿನ ಮುಸ್ಸಂಜೆ ಸಮಯದಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಿಸುವ ಸಂದರ್ಭ ಭಯಾನಕ ಶಬ್ದ ನಮ್ಮ ನೆಮ್ಮದಿ ಹಾಳು ಮಾಡಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವಯೋವೃದ್ದರ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ. ನಾವು ಇಲ್ಲಿ ಇರಬೇಕಾ ಬೇಡವಾ ಸರ್ಕಾರ ತೀರ್ಮಾನಿಸಲಿ. ನಾವು ಮನುಷ್ಯರಲ್ಲವಾ ? ನಮಗೇಕೆ ಈ ಶಿಕ್ಷೆ ಎನ್ನುತ್ತಾರೆ ಇವರು.
ಅಂತರ್ಜಲಕ್ಕೂ ಧಕ್ಕೆ
ಗ್ರಾಮದಲ್ಲಿನ ಕೊಳವೆ ಬಾವಿಗಳ ಮೇಲೂ ಇಲ್ಲಿನ ಸ್ಪೋಟಕದಿಂದಾಗಿ ಭೂಮಿ ಅದರುತ್ತಿದ್ದು ಅಂತರ್ಜಲಕ್ಕೂ ಹಾನಿಯಾಗುತ್ತಿದೆ. ಕೋರೆಯ ಆರಂಭಕ್ಕೂ ಮುನ್ನಾ ನಾವು ಬೆಳೆಯುವ ಬೆಳೆಗಳಿಗೆ ಅನಾಯಾಸವಾಗಿ ನೀರು ಹರಿಸುತ್ತಿದ್ದ ಕೊಳವೆ ಬಾವಿ ಇದೀಗ ಸಂಪೂರ್ಣ ಬರಿದಾಗಿದೆ.ಹಾಗಾಗಿ ನಮಗಾಗಿರುವ ನೋವು ಹಾಗೂ ನಷ್ಟವನ್ನು ನಾವು ಯಾರಿಗೆ ಹೇಳಿಕೊಳ್ಳೋದು ಎಂದು ಗ್ರಾಮದ ರೈತ ಮಹಿಳೆ ನಾಗರತ್ನಮ್ಮ ಹೇಳಿಕೊಳ್ಳುತ್ತಾರೆ. ಕಲ್ಲುಕೋರೆಯ ಸ್ಪೋಟಕದಿಂದಾಗಿ ಮನೆಗೆ ಕುಡಿಯುವ ನೀರು ಪೂರೈಸುತ್ತಿದ್ದ ಮನೆಯಂಗಳದ ಕೊಳವೆ ಬಾವಿಯಲ್ಲಿ ನೀರಿಲ್ಲವಾಗಿದೆ. ಇದರಿಂದಾಗಿ ನಾವು ದೂರದಿಂದ ಕುಡಿಯುವ ನೀರನ್ನು ಹೊತ್ತು ತರುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮತ್ತೋರ್ವ ನಿವಾಸಿ ಪ್ರದೀಪ್.
ಹಾರಂಗಿ ಕಾಲುವೆಯ ರಸ್ತೆಯೂ ಹಾನಿ
ಕೋರೆಯಲ್ಲಿನ ಕಲ್ಲು ಸಾಗಾಟದಿಂದಾಗಿ ಹಾರಂಗಿ ಎಡದಂಡೆ ಕಾಲುವೆಯ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಕೃಷಿಕರು ಈ ರಸ್ತೆಯಲ್ಲಿ ನಿತ್ಯ ಸಂಚರಿಸಲು ಅನಾನುಕೂಲವಾಗಿದೆ. ಲಾರಿಗಳ ಸಂಚಾರದಿAದಾಗಿ ಮಳೆ ಬಂದಾಗ ಕೆಸರು ಹಾಗೂ ಬಿಸಿಲು ಬಂದಾಗ ಭಯಾನಕ ಧೂಳು ಎದ್ದು ಬೆಳೆಗಳ ಮೇಲೆಲ್ಲಾ ಪದರ ಪದರವಾಗಿ ಕೂರುತ್ತಿದ್ದು ಎಲೆಗಳ ಮೂಲಕ ಖಾಂಡಕ್ಕೆ ಪತ್ರಹರಿತ್ತು ಪೂರೈಸುವ ವಿಧಾನ ಸ್ಥಗಿತಗೊಂಡು ಬೆಳೆದ ಬೆಳೆ ಕೈ ಸೇರುತ್ತಿಲ್ಲ ಎಂಬುದು ಅನೇಕ ಕೃಷಿಕರ ಅಳಲಾಗಿದೆ.
ಕೋರೆ ಮಾಲೀಕರ ದಬ್ಬಾಳಿಕೆ
ಕೋರೆಯ ಆರಂಭದ ಬಳಿಕ ನಿತ್ಯವೂ ಮುಸ್ಸಂಜೆಯಲ್ಲಿ ನಡೆಯುವ ಸ್ಫೋಟಕದ ಪರಿಣಾಮ ಮನೆಗಳು ಅದರುತ್ತಿವೆ ಗೋಡೆಗಳು ಬಿರುಕಾಗಿವೆ. ದನಗಳ ಕೊಟ್ಟಿಗೆಗಳು ಈಗಲೋ ಆಗಲೊ ಕುಸಿಯುವ ಹಂತ ತಲುಪಿವೆ. ನಮಗೆ ಪರಿಹಾರ ಕೊಡಿ ಎಂದು ಕೋರೆ ಮಾಲೀಕರ ಕಾರು ತಡೆದು ಕೋರಿಕೆ ಸಲ್ಲಿಸಲು ಹೋದರೆ ನಮ್ಮ ಮೇಲೆ ಅವರು ದಬ್ಬಾಳಿಕೆ ತೋರುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ತೊರೆನೂರು ಗ್ರಾಪಂ ಅಧಿಕಾರಿಗಳಿಗೆ ಹೇಳಿದರೆ ಏನೂ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಸಂಕಟ ತೋಡಿಕೊಂಡಿರುವ ನಿವಾಸಿಗಳು ಕುಶಾಲನಗರದ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ನಮ್ಮ ಸಂಕಟ ಅರಿಯಬೇಕು. ನಮಗೆ ನ್ಯಾಯ ನೀಡಬೇಕು. ಇಲ್ಲದಿದ್ದಲ್ಲಿ ನಾವೆಲ್ಲರೂ ಸಾಮೂಹಿಕವಾಗಿ ತಹಶೀಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸುತ್ತೇವೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.
- ಕೆ.ಎಸ್. ಮೂರ್ತಿ