ವೀರಾಜಪೇಟೆ, ಸೆ. ೨೪: ತಾ. ೨೬ ರಿಂದ ೨೮ ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆಯಲಿರುವ ಡಿವೈಎಫ್‌ಐನ ೧೩ನೇ ರಾಜ್ಯ ಸಮ್ಮೇಳನದ ಭಾಗವಾಗಿ, ಡಿವೈಎಫ್‌ಐನ ಕೊಡಗು ಜಿಲ್ಲಾ ಸಮ್ಮೇಳನವು ಸಿದ್ದಾಪುರದ ಗುಹ್ಯ ಅಗಸ್ತೆö್ಯÃಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಡಿವೈಎಫ್‌ಐ ಮಾಜಿ ಜಿಲ್ಲಾಧ್ಯಕ್ಷೆ ಭಾಗ್ಯ ಚಂಗಪ್ಪ ಸಂಘಟನೆಯ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನವನ್ನು ಡಿವೈಎಫ್‌ಐ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸಂತೋಷ್ ಬಜಾಲ್ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರಕಾರದ ಯುವ ವಿರೋಧಿ ನೀತಿಗಳು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಯುವ ಜನರು ಒಗ್ಗೂಡಿ ಹೋರಾಡಬೇಕಾಗಿದೆ ಎಂದರು.

ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಡಿವೈಎಫ್‌ಐ ವಯನಾಡು ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಜಿತಿನ್ ಕೋಮತ್ ಮಾತನಾಡಿ, ಎಲ್ಲರಿಗೂ ಉದ್ಯೋಗ ಹಾಗೂ ಜಾತಿ-ಧರ್ಮ, ಬೇಧ ರಹಿತ ಸೌಹಾರ್ದ ಭಾರತವನ್ನು ಕಟ್ಟಲು ಯುವಜನತೆ ಒಂದಾಗಬೇಕಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಡಿವೈಎಫ್‌ಐ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಬೇಕಾದ ಅಗತ್ಯತೆಯ ಕುರಿತು ಡಿವೈಎಫ್‌ಐ ಮಾಜಿ ಜಿಲ್ಲಾ ಮುಖಂಡ ಪಿ.ಆರ್. ಭರತ್ ಮಾತನಾಡಿದರು.

ವೇದಿಕೆಯಲ್ಲಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಎನ್.ಕೆ. ಅನಿಲ್, ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್. ಶಾಜಿ ರಮೇಶ್ ಉಪಸ್ಥಿತರಿದ್ದರು. ಸಮ್ಮೇಳನದ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಸಂಘಟನೆಯನ್ನು ಮುನ್ನಡೆಸಲು ೧೩ ಸದಸ್ಯರನ್ನು ಒಳಗೊಂಡ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಜ್ಯೋತಿ ಕೃಷ್ಣ (ನೆಲ್ಲಿಹುದಿಕೇರಿ), ಕಾರ್ಯದರ್ಶಿ ಸಾಧಿಕ್ ಎ.ಹೆಚ್. (ಕುಂಜಿಲ), ಖಜಾಂಚಿ ರಿಯಾಜ್ ಪಿ.ಹೆಚ್. (ಗುಹ್ಯ ಸಿದ್ದಾಪುರ) ಆಯ್ಕೆಗೊಂಡರು. ಅಲ್ಲದೆ, ಬಾಗೇಪಲ್ಲಿಯಲ್ಲಿ ನಡೆಯಲಿರುವ ೧೩ನೇ ರಾಜ್ಯ ಸಮ್ಮೇಳನಕ್ಕೆ ಜಿಲ್ಲೆಯಿಂದ ೬ ಮಂದಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.