ಮಡಿಕೇರಿ, ಸೆ. ೨೪: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯ ಎರಡನೇ ಹಂತ ನಡೆಯುತ್ತಿದ್ದು, ಲಾಜಿಕಲ್ ಡಿಸ್ಕಿçಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಕೊಡಗಿನ ೫೮,೮೮೩ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.

ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳು ಸೇರಿ ೫೬೭ ಮತಗಟ್ಟೆಗಳಿದ್ದು, ಇದರಲ್ಲಿ ಕೇವಲ ೫ ಮತಗಟ್ಟೆಗಳ ಮತದಾರರು ಮಾತ್ರ ನೋಟಿಸ್ ಪ್ರಕ್ರಿಯೆಯಿಂದ ಬಚಾವಾಗಿದ್ದಾರೆ. ಉಳಿದ ೫೬೨ ಮತಗಟ್ಟೆಗಳಲ್ಲಿ ಕನಿಷ್ಟ ಒಬ್ಬರಾದರೂ ಮತದಾರರಿಗೆ ನೋಟಿಸ್ ವಿತರಣೆಯಾಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ ೧೫೪, ೧೫೫, ಹಾಗೂ ೨೪೭, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ ೯ ಹಾಗೂ ೭೩ ಸಂಖ್ಯೆಯ ಮತದಾರರಿಗೆ ಯಾವುದೇ ನೋಟಿಸ್ ವಿತರಣೆಯಾಗಿಲ್ಲ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ ೨೪೭ ಕಂಡಕರೆಯಲ್ಲಿ ಯಾವುದೇ ಮತದಾರರಿಗೆ ನೋಟಿಸ್ ಜನರೇಟ್ ಆಗಿಲ್ಲ. ಇಲ್ಲಿ ೭೮೦ ಮತದಾರರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಂಡಕರೆ ಬೂತ್‌ನಲ್ಲಿ ಎಸ್.ಐ.ಆರ್ ಮತದಾರರ ಕರಡುಪಟ್ಟಿ ಪ್ರಕಟಗೊಳ್ಳುವ ಮೊದಲು ೧೪೦ಕ್ಕೂ ಅಧಿಕ ಮತದಾರರ ಹೆಸರು ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಬಿಎಲ್‌ಒ ಆ್ಯಪ್‌ನಲ್ಲಿ ಪತ್ತೆಯಾಗಿತ್ತು.ಆದರೆ ಶಕ್ತಿ ವರದಿಗಾರ ಇಸ್ಮಾಯಿಲ್ ಕಂಡಕರೆ ಅವರು ಲಾಜಿಕಲ್ ಡಿಸ್ಕಿçಪೆನ್ಸಿ ಬಗ್ಗೆ ತಿಳಿದು, ಮತದಾರರಿಗೆ ತಾವೇ ಖುದ್ದಾಗಿ ಮಾಹಿತಿ ನೀಡಿದ್ದರು. ಬಿಎಲ್‌ಒ ಅವರೊಂದಿಗೆ ಸೇರಿ ಲಾಜಿಕಲ್ ಡಿಸ್ಕಿçಪೆನ್ಸಿ ಸರಿಪಡಿಸಿದ್ದರು.

ಅದಲ್ಲದೇ ಕೆಲವು ಮತದಾರರಿಗೆ ಮ್ಯಾಪಿಂಗ್ ಮಾಹಿತಿ ಕೂಡ ಲಭ್ಯವಿರಲಿಲ್ಲ. ಅದನ್ನೂ ಕೂಡ ಸಂಗ್ರಹಿಸಿ ನೀಡಿದ್ದರು. ಇಸ್ಮಾಯಿಲ್ ಕಂಡಕರೆ ಅವರ ಪ್ರಯತ್ನ ಮತ್ತು ಬಿಎಲ್‌ಒ ಅವರ ಸಹಕಾರದಿಂದ ಕಂಡಕರೆ ಬೂತ್‌ನಲ್ಲಿ ಮತದಾರರು ನೋಟಿಸ್ ಪ್ರಕ್ರಿಯೆಯಿಂದ ಪಾರಾಗಿದ್ದಾರೆ ಎಂದು ಮತದಾರ ಸವಾದ್ ಉಸ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ ೧೫೪ ಮದಲಾಪುರ ಮತಗಟ್ಟೆಯ (ಬ್ಯಾಡಗೊಟ್ಟ ವ್ಯಾಪ್ತಿಯ) ಯಾವ ಮತದಾರರಿಗೂ ಕೂಡ ನೋಟಿಸ್ ಜಾರಿಯಾಗಿಲ್ಲ. ಈ ಮತಗಟ್ಟೆಯಲ್ಲಿ ೮೭೪ ಮತದಾರರು ಇದ್ದಾರೆ. ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಪ್ರತ್ಯೇಕಿಸಲಾಗಿದ್ದ ಮತದಾರರಿಗೆ ಮಾಹಿತಿ ನೀಡಿ ಎಲ್ಲವನ್ನೂ ಮೊದಲೇ ಸರಿಪಡಿಸಿದ್ದೆವು. ಆದ್ದರಿಂದ ಯಾರಿಗೂ ಕೂಡ ನೋಟಿಸ್ ಜಾರಿಯಾಗಿಲ್ಲ ಎಂದು ಮತಗಟ್ಟೆ ಅಧಿಕಾರಿ ಶಾಲಿನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದಲಾಪುರ ೧೫೫ ಮತಗಟ್ಟೆ ಸಂಖ್ಯೆ (ಎಡ ಪಾರ್ಶ್ವ) ಮಲ್ಲೇನಳ್ಳಿ ಹಾಗೂ ಶಿರಹೊಳಲು ವ್ಯಾಪ್ತಿಯ ಮತದಾರರಿಗೆ ಕೂಡ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಈ ಮತಗಟ್ಟೆಯಲ್ಲಿ ೭೯೩ ಮತದಾರರು ಇದ್ದಾರೆ. ವೀರಾಜಪೇಟೆ ಕ್ಷೇತ್ರ ಮತಗಟ್ಟೆ ಸಂಖ್ಯೆ ೭೩ ಎಮ್ಮೆಮಾಡು (ಪಡಿಯಾನಿ) ಭಾಗದ ಮತದಾರರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಇಲ್ಲಿ ೧೧೬೫ ಮತದಾರರು ಇದ್ದಾರೆ.