ಸೋಮವಾರಪೇಟೆ, ಸೆ. ೨೩: ಗ್ರಾಮಗಳು ಭಾರತದ ಆತ್ಮವಾದರೆ ಕೃಷಿ ಕ್ಷೇತ್ರ ದೇಶದ ಜೀವಾಳ. ವೈಜ್ಞಾನಿಕ ಕ್ಷೇತ್ರದಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ ಮಣ್ಣಿನಿಂದ ಉತ್ಪತ್ತಿಯಾಗುವ ಆಹಾರ ಪದಾರ್ಥಗಳ ಪೌಷ್ಠಿಕತೆಯನ್ನು ಸರಿಸಮವಾಗಿಸಲು ಸಾಧ್ಯವಿಲ್ಲ. ಈ ಮಣ್ಣಿನಲ್ಲಿ ಬೆಳೆ ಬೆಳೆದು ದೇಶಕ್ಕೆ ಅನ್ನ ನೀಡುವ ಅನ್ನದಾತ ಯುವ ರೈತರಿಗೆ ವಿವಾಹವಾಗಲು ಹುಡುಗಿಯರೇ ಸಿಗುತ್ತಿಲ್ಲ ಎಂದರೆ ನಂಬಲೇಬೇಕಾದ ಸಂಗತಿ!

ಹೌದು., ಮಲೆನಾಡು ಭಾಗದಲ್ಲಿ ವಿವಾಹದ ವಯಸ್ಸು ಮೀರಿದರೂ ಸಾವಿರಾರು ಯುವಕರಿಗೆ ಹೆಣ್ಣೇ ಸಿಗುತ್ತಿಲ್ಲ! ಈ ಕೊರಗು ಇಂದು ನಿನ್ನೆಯದಲ್ಲ; ಕಳೆದ ಹತ್ತಾರು ವರ್ಷಗಳಿಂದಲೂ ಹುಡುಗಿ ಹುಡುಕಿ ಸುಸ್ತಾದ ಹಲವಷ್ಟು ಯುವಕರು ಈಗಲೂ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯಗಳು ಇಳಿಮುಖವಾಗಲು ಇದೂ ಸಹ ಒಂದು ಕಾರಣ ಎಂದರೆ ಅತಿಶಯೋಕ್ತಿಯಲ್ಲ!

ಸೋಮವಾರಪೇಟೆ ಶೇ.೯೯ ರಷ್ಟು ಗ್ರಾಮೀಣ ಪ್ರದೇಶವನ್ನು ಹೊಂದಿರುವ ತಾಲೂಕು. ಕೊಡ್ಲಿಪೇಟೆಯಿಂದ ಮಾದಾಪುರ, ಬಾಣಾವರದಿಂದ ಹಿಡಿದು ಕುಡಿಗಾಣದವರೆಗೆ ಇಂದಿಗೂ ನೂರಾರು ಮಂದಿ ಯುವ ರೈತರು/ಕೃಷಿಕರಿಗೆ ವಿವಾಹವಾಗಲು ವಧುಗಳು ಸಿಗದೇ ಅವಿವಾಹಿತರಾಗಿಯೇ ಇದ್ದಾರೆ. ಒಂದೊAದು ಗ್ರಾಮದಲ್ಲಿ ಕನಿಷ್ಟವೆಂದರೂ ೩೦ ಯುವಕರು ಮದುವೆಗೆ ತಯಾರಿದ್ದರೂ ಕಂಕಣಭಾಗ್ಯ ಲಭಿಸುತ್ತಿಲ್ಲ. ಇವರೆಲ್ಲರೂ ೩೦ ರಿಂದ ೪೫ ವರ್ಷದೊಳಗಿನವರು ಎಂಬುದು ಗಮನಾರ್ಹ!

ಮಲೆನಾಡು ಭಾಗದಲ್ಲಿ ಕನಿಷ್ಟ ೩ ರಿಂದ ೨೦ ಏಕರೆ ಕಾಫಿ ತೋಟ, ಗದ್ದೆಗಳನ್ನು ಹೊಂದಿರುವ ಯುವ ರೈತರಿಗೆ ಮದುವೆಯಾಗಲು ಹುಡುಗಿಯರ ಬರ ಕಾಡಲಾರಂಭಿಸಿದೆ. ಎಲ್ಲಾ ಅನುಕೂಲಗಳಿದ್ದರೂ ಗ್ರಾಮೀಣ ಭಾಗಕ್ಕೆ ಮದುವೆಯಾಗಿ ಬರಲು ಹೆಚ್ಚಿನ ಯುವತಿಯರು ಹಿಂದೇಟು ಹಾಕುತ್ತಿದ್ದಾರೆ.

ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್‌ನೊಂದಿಗೆ ಸುಸಜ್ಜಿತ ಮನೆ, ತೋಟ, ಗದ್ದೆ, ಜೀಪು-ಕಾರು, ಬೈಕ್‌ಗಳಿದ್ದರೂ ಹಲವಷ್ಟು ಮನೆಗಳಲ್ಲಿ ಸೊಸೆಯಂದಿರೇ ಇಲ್ಲ. ದಿನಂಪ್ರತಿ ಹತ್ತಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ, ಲೈನ್ ಮನೆಗಳನ್ನು ನಿರ್ಮಿಸಿ ಕೂಲಿ ಕಾರ್ಮಿಕ ಕುಟುಂಬಕ್ಕೆ ಆಶ್ರಯದೊಂದಿಗೆ ಕೆಲಸಕ್ಕೆ ಸಂಬಳ ನೀಡುವ ಕೃಷಿ ಕುಟುಂಬದ ಸದಸ್ಯ, ಹತ್ತಾರು ಏಕರೆ ಜಾಗದ ವಾರಸುದಾರನಿಗೆ ಮದುವೆಯಾಗುತ್ತಿಲ್ಲ. ಮನೆ ಬೆಳಗುವ ಸೊಸೆಗಾಗಿ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಾಯುತ್ತಿರುವ ವೃದ್ಧ ಪೋಷಕರಿಗೆ ನೆಮ್ಮದಿ ಸಿಗುತ್ತಿಲ್ಲ. ಇದು ಇಂದಿನ ಗ್ರಾಮೀಣ ಭಾಗದ ಹಲವಷ್ಟು ಮನೆಗಳಲ್ಲಿ ಕಂಡುಬರುತ್ತಿರುವ ವಾಸ್ತವ.

ಇದರೊಂದಿಗೆ ಕನಿಷ್ಟ ಪಿಯುಸಿಯಿಂದ ಗರಿಷ್ಠ ಸ್ನಾತಕ್ಕೋತ್ತರ ಪದವಿ ಪಡೆದು ಪಟ್ಟಣದಲ್ಲಿ ಕೆಲಸ ಮಾಡಿಕೊಂಡು ಗ್ರಾಮದ ಮನೆಯಲ್ಲಿ ನೆಲೆಸಿರುವ ಯುವಕರಿಗೂ ಕನ್ಯೆಯರು ಸಿಗುತ್ತಿಲ್ಲ. ಸ್ವಂತ ಉದ್ಯಮ ನಡೆಸುತ್ತಿರುವ ಯುವಕರೂ ಇದರಿಂದ ಹೊರತಾಗಿಲ್ಲ. ಇದೇ ಕೊರಗಿನಿಂದಾಗಿ ಹಲವಷ್ಟು ಮಂದಿ ಯುವಕರು ಗ್ರಾಮಗಳನ್ನು ತೊರೆದು ಕನಿಷ್ಟ ಸಂಬಳಕ್ಕೆ ಪಟ್ಟಣ ಸೇರುತ್ತಿದ್ದಾರೆ. ಪರಿಣಾಮ ಗ್ರಾಮದ ಮನೆಗಳಲ್ಲಿ ವೃದ್ದ ಪೋಷಕರು ಮಾತ್ರ ಅಷ್ಟೋ ಇಷ್ಟೋ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನ ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ ಈ ಗ್ರಾಮಗಳು ಸಾವಿರಾರು ಏಕರೆ ಕೃಷಿ ಭೂಮಿಯನ್ನು ಹೊಂದಿರುವ, ನೈಸರ್ಗಿಕವಾಗಿ ಅತ್ಯಂತ ಶ್ರೀಮಂತವಾಗಿರುವ, ಮೂಲಭೂತ ಸೌಕರ್ಯಗಳನ್ನು ತಕ್ಕಮಟ್ಟಿಗಾದರೂ ಹೊಂದಿರುವ ಗ್ರಾಮಗಳು. ಆದರೆ ಪ್ರಸ್ತುತ ಈ ಭಾಗದಲ್ಲಿ ವಾಸಿಸುತ್ತಿರುವವರ ಸಂಖ್ಯೆ ತೀರಾ ಕಡಿಮೆ. ಬಹುತೇಕ ಯುವ ಜನಾಂಗ ಪಟ್ಟಣ ಸೇರಿ ಅಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಜರುಗುವ ಪುತ್ತರಿ, ಕೈಲ್‌ಮುಹೂರ್ತ ಹಬ್ಬಗಳಿಗೂ ಶೇ. ೧೦೦ರ ಹಾಜರಾತಿ ಇರುವುದಿಲ್ಲ! ಕುಟುಂಬದ ಶುಭ-ಅಶುಭ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ.

ಗ್ರಾಮಗಳಲ್ಲಿಯೇ ಇದ್ದರೆ ಹುಡುಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು-ಮೈಸೂರಿಗೆ ಹೋದ ಹಲವಷ್ಟು ಯುವಕರು ಸೋಮವಾರಪೇಟೆ ತಾಲೂಕಿನಲ್ಲಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರ ಪಟ್ಟಣಗಳಿಗೆ ವ್ಯಾಸಂಗ, ಉದ್ಯೋಗಕ್ಕೆ ತೆರಳಿದ ಶೇ. ೮೦ ರಷ್ಟು ಯುವತಿಯರು ಮತ್ತೆ ಗ್ರಾಮಗಳಲ್ಲಿ ಬದುಕು ಕಟ್ಟಿಕೊಳ್ಳಲು ಸುತಾರಾಂ ಸಿದ್ಧರಾಗುತ್ತಿಲ್ಲ.

ಮಲೆನಾಡು ಭಾಗ ಬಿಟ್ಟು ಪಟ್ಟಣದಲ್ಲಿಯೇ ಜೀವನ ಕಟ್ಟಿಕೊಳ್ಳುವ ನಿರ್ಧಾರಕ್ಕೆ ಬರುವ ಯುವತಿಯರು ಜಾತಿಯನ್ನು ಮೀರಿ ಪ್ರೇಮ ವಿವಾಹವಾಗಿ ಪಟ್ಟಣ ಸೇರುತ್ತಿರುವುದು ಒಂದೆಡೆಯಾದರೆ, ಮನೆಯವರನ್ನು ಒಪ್ಪಿಸಿ ಶಾಸ್ತೊçÃಕ್ತವಾಗಿ ಹಲವರು ವಿವಾಹವಾಗುತ್ತಿದ್ದರೂ ಗ್ರಾಮಗಳಲ್ಲಿ ನೆಲೆಸಿ ಕೃಷಿ ಮುಂದುವರೆಸಲು ಸುತಾರಾಂ ಸಿದ್ಧರಾಗುತ್ತಿಲ್ಲ. ಇನ್ನು ಗ್ರಾಮೀಣ ಭಾಗದ ಯುವಕರು ತಮ್ಮ ಸಹೋದರಿಯರಿಗೆಲ್ಲಾ ಮದುವೆ ಮಾಡಿಸಿ ತಾವು ಮಾತ್ರ ಮದುವೆಯಾಗದೇ ಉಳಿದುಕೊಂಡಿದ್ದಾರೆ.

ಪಟ್ಟಣದ ಬದುಕಿಗೆ ಮಾರುಹೋಗಿ ಗ್ರಾಮ ತೊರೆದು ನಗರ ಸೇರಿದ ಹಲವಷ್ಟು ಯುವತಿಯರು ಈಗಲೂ ತಿಂಗಳಿಗೆ ೧೫ ರಿಂದ ೨೦ ಸಾವಿರ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇಲ್ಲೇ ಉಳಿದ ಯುವಕರು ವಾರ್ಷಿಕವಾಗಿ ಕನಿಷ್ಟ ರೂ. ೫ ಲಕ್ಷ ಮೇಲ್ಪಟ್ಟು ಕೃಷಿ, ತೋಟದ ಉತ್ಪಾದನೆಯಿಂದ ಸಂಪಾದಿಸುತ್ತಿದ್ದರೂ ಪತ್ನಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ತಾಲೂಕಿನ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಕೊತ್ನಳ್ಳಿ, ಬೆಂಕಳ್ಳಿ, ಬೀಕಳ್ಳಿ, ಕನ್ನಳ್ಳಿ, ಹರಗ, ಕುಡಿಗಾಣ, ಹೆಗ್ಗಡಮನೆ, ಶಾಂತಳ್ಳಿ, ತಲ್ತರೆಶೆಟ್ಟಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ, ದೊಡ್ಡಮನೆಕೊಪ್ಪ, ಸೋಮವಾರಪೇಟೆ ಕಸಬಾ ಹೋಬಳಿಯ ಯಡೂರು, ಹಾನಗಲ್ಲು ಶೆಟ್ಟಳ್ಳಿ, ಹಾನಗಲ್ಲು, ತಾಕೇರಿ, ಕಿರಗಂದೂರು, ಐಗೂರು, ಚೌಡ್ಲು ಸೇರಿದಂತೆ ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ ಹೋಬಳಿಯ ಹಲವಷ್ಟು ಗ್ರಾಮಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿರುವ ನೂರಾರು ಯುವಕರು ಅವಿವಾಹಿತರಾಗಿಯೇ ಉಳಿದುಕೊಂಡಿದ್ದಾರೆ. ಒಂದೊAದು ಗ್ರಾಮದಲ್ಲಿ ಕನಿಷ್ಟವೆಂದರೂ ೨೦ಕ್ಕೂ ಅಧಿಕ ಯುವಕರು ಮದುವೆಯ ವಯಸ್ಸು ಮೀರುವ ಹಂತಕ್ಕೆ ಬಂದಿದ್ದಾರೆ.

‘ಎಲ್ಲೂ ಹುಡುಗಿ ಸಿಗುತ್ತಿಲ್ಲ’ ಎಂಬ ನಿರಾಶಾದಾಯಕ ಉತ್ತರ ಕೇಳಿಬರುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಗ್ರಾಮೀಣ ಪ್ರದೇಶದ ಜನಸಂಖ್ಯೆಯ ಮೇಲೆ ಯಾವ ಪರಿಣಾಮ ಬೀರಬಹುದು? ಗ್ರಾಮಗಳ ಮುಂದಿನ ಭವಿಷ್ಯ ಹೇಗೆ? ಕೃಷಿ ಕಾರ್ಯಗಳ ಮೇಲೆ ಯಾವ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಬಗ್ಗೆ ಗಂಭೀರ ಪ್ರಶ್ನೆ ಎದುರಾಗುತ್ತದೆ.

೨೦೧೧ರ ಭಾರತದ ಜನಗಣತಿಯ ಪ್ರಕಾರ ಕೊಡಗು ಜಿಲ್ಲೆಯ ಲಿಂಗಾನುಪಾತ ಪ್ರತಿ ೧,೦೦೦ ಪುರುಷರಿಗೆ ೧,೦೧೯ ಮಹಿಳೆಯರು ಇದ್ದರು. ಅಂದರೆ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಇದರ ಶೇಕಡಾವಾರು ಅಂದಾಜಿಸಿದರೆ ೧೦೧.೯ ರಷ್ಟಿತ್ತು. ೬ ವಯೋಮಾನದೊಳಗಿನ ಮಕ್ಕಳ ಲಿಂಗಾನುಪಾತ ಪ್ರತಿ ೧,೦೦೦ ಗಂಡು ಮಕ್ಕಳಿಗೆ ೯೭೮ ಹೆಣ್ಣು ಮಕ್ಕಳು ಇದ್ದರು. ೨೦೧೧ರಲ್ಲಿಯೇ ಹೆಣ್ಣುಮಕ್ಕಳಿಗಿಂತ ೨೨ ಗಂಡುಮಕ್ಕಳು ಹೆಚ್ಚಿದ್ದರು. ಜನಗಣತಿಯ ೧೫ ವರ್ಷಗಳ ತರುವಾಯ ಈಗಿನ ಲಿಂಗಾನುಪಾತದಲ್ಲಿ ಎಷ್ಟು ವ್ಯತ್ಯಾಸಗಳಾಗಿವೆ? ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜನಸಂಖ್ಯೆಯ ಬೆಳವಣಿಗೆ ಎಷ್ಟು ಕುಂಠಿತವಾಗಿದೆ? ಎಂಬುದು ಸಂಶೋಧನೆಗೆ ಅರ್ಹವಾದ ವಿಷಯವೂ ಆಗಿದೆ.

ಗ್ರಾಮಗಳು ಉಳಿಯಬೇಕಾದರೆ ಅಲ್ಲಿ ಜನರು ಉಳಿಯಬೇಕು. ಜನಸಂಖ್ಯೆಯ ಬೆಳವಣಿಗೆ ಆಗಬೇಕು. ಇದಕ್ಕೆ ಸಮಾಜ ಹಾಗೂ ಸಂವಿಧಾನದ ಮಾನ್ಯತೆಯಂತೆ ವಿವಾಹಗಳು ನಡೆಯಬೇಕು. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿರುವ ಯುವಕರನ್ನು ವರಿಸಲು ಯುವತಿಯರು ಮುಂದೆ ಬರಬೇಕು. ಹಾಗಾದಾಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆ ಬೆಳವಣಿಗೆಯಾಗಿ ಕೃಷಿ ಕಾರ್ಯಗಳು ನಡೆಯುತ್ತವೆ. ಪಾಳು ಬಿದ್ದಿರುವ ಗದ್ದೆ ತೋಟಗಳು ಮತ್ತೆ ಕೃಷಿಗೆ ತೆರೆದುಕೊಳ್ಳುತ್ತವೆ. ‘ಹೀಗಾಗುತ್ತಾ..?’ ಇದು ಯಕ್ಷ ಪ್ರಶ್ನೆ! - ವಿಜಯ್ ಹಾನಗಲ್