ಪೊನ್ನಂಪೇಟೆ, ಸೆ. ೨೩: ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿಶೇಷ ಶೈಕ್ಷಣಿಕ ಪುರಸ್ಕಾರವನ್ನು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ತಮ್ಮ ತಂದೆ ದುದ್ದಿಯಂಡ ದಿ. ಹುಸೈನಾರ್ ಹಾಜಿ ಮತ್ತು ತಾಯಿ ದಿ. ಆಮೀನ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ಕೆ.ಎಂ.ಎ. ಕನ್ನಡ ಚೈತನ್ಯ ಪುರಸ್ಕಾರ-೨೦೨೬ಕ್ಕೆ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಈ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸಲ್ಲಿಕೆಯಾದ ಅರ್ಜಿಗಳ ಪೈಕಿ ಇಡೀ ಕೊಡಗು ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಈ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು.

ಅರ್ಹ ವಿದ್ಯಾರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕೃತಗೊಂಡ ಅಂಕಪಟ್ಟಿ, ಆಧಾರ್ ಕಾರ್ಡ್ ಪ್ರತಿ, ಹಾಲಿ ವ್ಯಾಸಂಗ ದೃಢೀಕರಣ ಪತ್ರ ಸೇರಿದಂತೆ ತಮ್ಮ ಪೂರ್ಣ ವಿವರ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ೩ ಭಾವಚಿತ್ರದೊಂದಿಗೆ ತಾ. ೩೦ ರೊಳಗಾಗಿ ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್, ಪ್ರಧಾನ ಕಚೇರಿ, ಡಿ.ಹೆಚ್.ಎಸ್. ಕಟ್ಟಡ, ಮುಖ್ಯ ರಸ್ತೆ, ವೀರಾಜಪೇಟೆ, ಕೊಡಗು ಜಿಲ್ಲೆ, ಪಿನ್‌ಕೋಡ್: ೫೭೧೨೧೮ ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಶೇಷ ಪುರಸ್ಕಾರಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳು ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಗೈರುಹಾಜರಾದಲ್ಲಿ ಅವರ ಪರವಾಗಿ ಬೇರೆಯವರಿಗೆ ಪುರಸ್ಕಾರ ಸ್ವೀಕರಿಸಲು ಅವಕಾಶ ಇರುವುದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೮೮೬೦೬೦೩೪೨ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.