ಕೊಡ್ಲಿಪೇಟೆ, ಸೆ. ೨೨: ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತವು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅಭಿವೃದ್ಧಿ ಕಾರ್ಯಗಳು ಕುಂಠಿತಗೊAಡಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜನಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಕ್ಷಣ ಪಿಡಿಓ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘ-ಸAಸ್ಥೆಗಳು ಹಾಗೂ ಸಾರ್ವಜನಿಕರು ಕೊಡ್ಲಿಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಬೆಂಬಲ ಸೂಚಿಸಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಸುಮಾರು ಒಂದು ಗಂಟೆ ಕಾಲ ಅಂಗಡಿ-ಮುAಗಟ್ಟುಗಳನ್ನು ಬಂದ್ ಮಾಡಿದರು.
ಎಸ್ಡಿಎಂಸಿ ಅಧ್ಯಕ್ಷ ವಸಂತ್ ಮಾತನಾಡಿ, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ವಿಳಂಬಗೊಳಿಸಲಾಗುತ್ತಿದೆ ಹಾಗೂ ಅಭಿವೃದ್ಧಿ ಅಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಪಂಚಾಯಿತಿ ಕಚೇರಿಯಲ್ಲಿ ನಡೆಯಬೇಕಾದ ಕೆಲವು ಕೆಲಸ-ಕಾರ್ಯಗಳು ಹೋಟೆಲ್ಗಳು ಹಾಗೂ ಖಾಸಗಿ ವಾಹನಗಳಲ್ಲಿ ನಡೆಯುತ್ತಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದರು. ಕೆಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಅಧಿಕಾರಿಯವರು ಗುತ್ತಿಗೆದಾರರ ಪ್ರಭಾವಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿತನ ತೋರುತ್ತಿಲ್ಲ ಎಂದು ದೂರಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೋಭಿತ್ ಗೌಡ ಮಾತನಾಡಿ, ಪಿಡಿಓ ಅವರ ಕಾರ್ಯವೈಖರಿ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಅಧಿಕಾರಿಯ ಕಾರ್ಯವೈಖರಿ ಕುರಿತು ಹಲವು ಬಾರಿ ಸೋಮವಾರಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಅನಿಲ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎರಡು ಕುಡಿಯುವ ನೀರಿನ ಘಟಕಗಳು ಪದೇಪದೇ ಕೆಟ್ಟು ಹೋಗುತ್ತಿವೆ. ಈ ಹಿಂದೆ ರೂ. ೫ಕ್ಕೆ ದೊರೆಯುತ್ತಿದ್ದ ನೀರಿನ ದರವನ್ನು ಇದೀಗ ೧೦ಕ್ಕೆ ಹೆಚ್ಚಿಸಲಾಗಿದೆ. ದರ ಹೆಚ್ಚಳದಿಂದ ಸಂಗ್ರಹವಾಗುತ್ತಿರುವ ಆದಾಯವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ಪಂಚಾಯಿತಿ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.
ಭಾನುವಾರದ ಸಂತೆ ಮುಗಿದ ಬಳಿಕ ಸಮರ್ಪಕವಾಗಿ ಸ್ವಚ್ಛತೆ ಮಾಡದಿರುವುದರಿಂದ ಸಮೀಪದ ಎರಡು ಶಾಲೆಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಕೊಡ್ಲಿಪೇಟೆ ಒಕ್ಕಲಿಗ ಯುವ ವೇದಿಕೆ ಕಾರ್ಯದರ್ಶಿ ಅವಿನಾಶ್ ಆರೋಪಿಸಿದರು. ಸಂತೆ ಮುಗಿದ ತಕ್ಷಣ ಕಸ ಹಾಗೂ ತ್ಯಾಜ್ಯ ತೆರವುಗೊಳಿಸಿ, ವಿದ್ಯಾರ್ಥಿಗಳಿಗೆ ಸ್ವಚ್ಛ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರು ಅರ್ಜಿ ಹಾಗೂ ಸಮಸ್ಯೆಗಳಿಗಾಗಿ ಪಂಚಾಯಿತಿಗೆ ಬಂದಾಗ ಪಿಡಿಓ ಲಭ್ಯವಿರುವುದಿಲ್ಲ. ಇಂತಹ ಅಧಿಕಾರಿ ಯಾಕೆ ಬೇಕು? ಎಂದು ಪ್ರಶ್ನಿಸಿದರು. ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಸಚಿನ್ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕಾರ್ಯವೈಖರಿ ಹಾಗೂ ಆಡಳಿತ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನವಿದೆ. ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಬದಲು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿನ್ನೆಲೆ ಸಂಬAಧಪಟ್ಟ ಮೇಲಧಿಕಾರಿಗಳು ಅಧಿಕಾರಿಯ ಕಾರ್ಯವೈಖರಿಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಲೋಪಗಳು ದೃಢಪಟ್ಟರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವರ್ತಕ ಸಿದ್ದೀಕ್ ಮಾತನಾಡಿ, ಈ ಬಾರಿ ಕುರಿ ಮಾಂಸದ ಅಂಗಡಿ ಪರವಾನಗಿಗೆ ಪಿಡಿಓ ಅವರು ರೂ.೧.೫ ಲಕ್ಷ ಪಾವತಿಸುವಂತೆ ಸೂಚಿಸಿದ್ದರು. ಅಷ್ಟು ಹಣ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇರೆ ಪಂಚಾಯಿತಿ ವ್ಯಾಪ್ತಿಗೆ ತೆರಳಿ ಅಂಗಡಿ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದರು.
ಇದೇ ಪಂಚಾಯಿತಿಯಲ್ಲಿ ಇತರರಿಗೆ ರೂ.೬೦ ಸಾವಿರಕ್ಕೆ ಅಂಗಡಿ ಪರವಾನಗಿ ನೀಡಲಾಗಿದೆ ಎಂದು ಆರೋಪಿಸಿದ ಅವರು, ಪರವಾನಗಿ ಮೊತ್ತದಲ್ಲಿ ಇಷ್ಟೊಂದು ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ಪಂಚಾಯಿತಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ವರ್ಗಾವಣೆ ಮಾಡುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಪ್ರತಿಭಟನಾಕಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪಿಡಿಓ ವರ್ಗಾವಣೆ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.