ನಾಪೋಕ್ಲು, ಸೆ. ೨೨ : ಸ್ಥಳೀಯ ಮಾರುಕಟ್ಟೆ ಪ್ರದೇಶ, ರಸ್ತೆಯ ಎರಡು ಬದಿಗಳನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿಡುವ ಉದ್ದೇಶದಿಂದ ಟೀಮ್ ನ್ಯಾಷನಲ್ ನಾಪೋಕ್ಲು ಮತ್ತು ಭಗವತಿ ಹಾಕಿ ಕ್ಲಬ್ ನಾಪೋಕ್ಲು ಇವುಗಳ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ಅಭಿಯಾನದ ಅಂಗವಾಗಿ ಯುವಕರು ಸ್ವಯಂಪ್ರೇರಿತರಾಗಿ ಆಗಮಿಸಿ ಮಾರುಕಟ್ಟೆಯಿಂದ ಸೀನಿಯರ್ ಕಾಲೇಜ್ವರಗಿನ ಮುಖ್ಯ ರಸ್ತೆಯ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿದ್ದ ಕಸ-ಕಡ್ಡಿಗಳನ್ನು ಟೀಮ್ ನ್ಯಾಷನಲ್ ನಾಪೋಕ್ಲು ಮತ್ತು ಭಗವತಿ ಹಾಕಿ ಕ್ಲಬ್ ನಾಪೋಕ್ಲು ಸದಸ್ಯರು ಸ್ವಚ್ಛಗೊಳಿಸಿ ಸೂಕ್ತ ಕ್ರಮ ಕೈಗೊಂಡರು.
ಸಾರ್ವಜನಿಕರಿಗೆ ಜಾಗೃತಿ ಹಾಗೂ ಮನವಿ: “ನಮ್ಮ ನಾಪೋಕ್ಲು - ಸ್ವಚ್ಛ ನಾಪೋಕ್ಲು” ಮತ್ತು ಸುಂದರ ನಾಪೋಕ್ಲು - ನಮ್ಮೆಲ್ಲರ ಹೊಣೆ” ಎಂಬ ಜಾಗೃತಿ ಸಂದೇಶದೊAದಿಗೆ ಯುವಕರು ಶ್ರಮದಾನ ಮಾಡಿದರು. ನಾಪೋಕ್ಲು ಪಟ್ಟಣವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ, ಸೂಕ್ತ ಸ್ಥಳಗಳಲ್ಲಿಯೇ ವಿಲೇವಾರಿ ಮಾಡಿ ನೈರ್ಮಲ್ಯ ಕಾಪಾಡಲು ಸಹಕರಿಸಬೇಕು ಎಂದು ಸಂಘಟಕರು ಮನವಿ ಮಾಡಿದರು.
ಸ್ಥಳೀಯ ಸಂಸ್ಥೆಗಳು ಹಾಗೂ ಯುವಕರ ಈ ಪರಿಸರ ಕಾಳಜಿಯ ಶ್ರಮದಾನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಹಾಗೂ ಉತ್ತಮ ಸ್ಪಂದನ ವ್ಯಕ್ತವಾಯಿತು.