ಕೂಡಿಗೆ. ಸೆ , ೨೨: ವೃದ್ಧೆಯೊಬ್ಬರ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರ್ಣ ಚಂದ್ರ ಬಡಾವಣೆಯ ನಿವಾಸಿಯಾದ ರತ್ನ (೭೭) ಎಂಬವರೆ ಹತ್ಯೆಯಾದ ವೃದ್ಧೆ. ಅವರಿಗೆ ಪರಿಚಿತನಾಗಿದ್ದ ಆಟೋ ಚಾಲಕ ಬಸವನತ್ತೂರು ಗ್ರಾಮದ ಟಾಟಾ ವರ್ಕ್ಸ್ನ ಕ್ವಾಟ್ರಸ್ನ ನಿವಾಸಿ ಕುಮಾರ ಹತ್ಯೆಗೈದ ಆರೋಪಿಯಾಗಿದ್ದಾನೆ.
ರತ್ನ ಅವರಿಗೆ ಅತ್ಯಂತ ನಂಬಿಕಸ್ತನಾಗಿದ್ದ ಕುಮಾರ್ ಆಟೋ ಚಾಲಕನಾಗಿದ್ದು, ವೃದ್ಧೆಯ ಲೇವಾದೇವಿ ವ್ಯವಹಾರದ ಬಗ್ಗೆ ಚೆನ್ನಾಗಿ ಅರಿತಿದ್ದ. ಬೇರೊಬ್ಬರಿಗೆ ಹಣ ಕೊಡಿಸುವ ನೆಪದಲ್ಲಿ ಆಟೋದಲ್ಲಿ ಕೂಡುಮಂಗಳೂರಿನ ಮನೆಯಿಂದ ವೃದ್ಧೆಯನ್ನು ಕರೆದೊಯ್ದು ಕುಶಾಲನಗರ ಸಮೀಪದ ಟಿಬೆಟ್ ಕ್ಯಾಂಪ್ನ ಮಾರ್ಗ ಮಧ್ಯದಲ್ಲಿ ವೃದ್ಧೆಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಲಾಗಿದೆ.
ಶನಿವಾರದಿಂದ ಕಾಣೆಯಾಗಿದ್ದ ವೃದ್ದೆಯ ಮೃತದೇಹವು ಬೈಲುಕೊಪ್ಪ-ಟಿಬೇಟ್ ಕ್ಯಾಂಪ್ನಲ್ಲಿ ನಡೆಯುತ್ತಿರುವ ನೂತನ ಹೆದ್ದಾರಿ ಬದಿಯ ಜೋಳದ ಹೊಲದಲ್ಲಿ ಸೋಮವಾರ ಪತ್ತೆಯಾಗಿತ್ತು.
ಬೈಲುಕೊಪ್ಪ ಪೊಲೀಸ್ ಠಾಣೆಯಿಂದ ಮಾಹಿತಿ ಬಂದ ತಕ್ಷಣವೇ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ನೇತೃತ್ವದ ತಂಡ ಕುಮಾರ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ನಂತರ ಟಿಬೇಟ್ ಕ್ಯಾಂಪ್ನ ಜೋಳದ ಹೊಲಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಹೂರ ತೆಗೆದಿದ್ದಾರೆ.
ಮೃತ ಮಹಿಳೆ ಹೊರಗೆ ತೆರಳಲು ಆಟೋ ಚಾಲಕ ಕುಮಾರ್ನನ್ನು ಹೆಚ್ಚು ಅವಲಂಬಿತರಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆತ ವೃದ್ಧೆಯ ಬಳಿಯಿದ್ದ ಹಣ ಮತ್ತು ಚಿನ್ನ ದೋಚುವ ಉದ್ದೇಶದಿಂದ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯದಲ್ಲಿ ಕುಮಾರ್ನೊಂದಿಗೆ ಇನ್ನೂ ಒಬ್ಬರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರ ಮತ್ತು ಸುಂಟಿಕೂಪ್ಪ ಠಾಣಾಧಿಕಾರಿ ಮೋಹನ್ ರಾಜ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.