ಮಡಿಕೇರಿ, ಸೆ. ೨೨: ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ೨೦೨೫-೨೬ನೇ ವಾರ್ಷಿಕ ಮಹಾಸಭೆ ಯೂನಿಯನ್ ಸಭಾಂಗಣದಲ್ಲಿ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯೂನಿಯನ್ ಮುಖ್ಯ ಉದ್ದೇಶ ಸಹಕಾರಿ ಶಿಕ್ಷಣ, ತರಬೇತಿ, ಪ್ರಚಾರವಾಗಿದ್ದು ಮಹಾಮಂಡಲದ ಮಾರ್ಗದರ್ಶನದನ್ವಯ ತನ್ನೆಲ್ಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ೩೩೯ ಸಂಘಗಳು ಕಾಯ್ದೆ ಪ್ರಕಾರ ನೋಂದಣಿಯಾಗಿದ್ದು ೩೦೯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ೨೬೩ ಸಂಘಗಳು ಯೂನಿಯನ್ ಸದಸ್ಯತ್ವ ಹೊಂದಿದ್ದು, ಲಾಭದಲ್ಲಿರುವ ಸಂಘಗಳು ನಿಯಮಾನುಸಾರ ಶಿಕ್ಷಣ ನಿಧಿ ಪಾವತಿಸುತ್ತಿದ್ದು ೨೦೨೫-೨೬ನೇ ಸಾಲಿನಲ್ಲಿ ಜಿಲ್ಲೆಯಿಂದ ರೂ. ೮೧,೨೧,೭೩೮.೩೨ ರಷ್ಟು ಸಂಗ್ರಹಿಸಿದ್ದು ಕಳೆದ ಹಲವು ವರ್ಷಗಳಲ್ಲಿ ಶೇ. ೧೦೦ ರಷ್ಟು ಶಿಕ್ಷಣ ನಿಧಿ ಸಂಗ್ರಹಿಸುವ ರಾಜ್ಯದ ಏಕೈಕ ಜಿಲ್ಲೆಯಾಗಿದೆ ಎಂದರು. ಸಹಕಾರ ಸಚಿವಾಲಯ ಪ್ರಾರಂಭಿಸಿ ೫ ವರ್ಷವಾದ ಪ್ರಯುಕ್ತ ಸಂಘ - ಸಂಸ್ಥೆಗಳ ಸಹಯೋಗದಲ್ಲಿ ಯೂನಿಯನ್ ಸಪ್ತಾಹ ಏರ್ಪಡಿಸಿರುವುದನ್ನು ಸಭೆಯ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳಾದ ಹಾತೂರು ಪ್ಯಾಕ್ಸ್ನ ಬಾಂಡ್ ಗಣಪತಿ, ಕುಶಾಲನಗರ ಪ್ಯಾಕ್ಸ್ನ ಟಿ.ಎ. ಶರವಣ ಕುಮಾರ್, ವೀರಾಜಪೇಟೆ ಪಿಕಾರ್ಡ್ ಬ್ಯಾಂಕ್ನ ಕೆ.ಪಿ. ನಾಗರಾಜು, ಕಾಫಿ ಬೆಳೆಗಾರರ ಸಹಕಾರ ಸಂಘದ ಸುರೇಶ್ ಮಾತನಾಡಿ, ಅಧ್ಯಯನ ಪ್ರವಾಸದಲ್ಲಿರುವ ಇಲಾಖಾ ನಿಯಮಗಳನ್ನು ಸಡಿಲಿಸಲು, ಸಹಕಾರ ದವಸ ಭಂಡಾರಗಳಿಗೆ ಲೆಕ್ಕಪರಿಶೋಧನಾ ಶುಲ್ಕ ಭರಿಸುವ ಶಕ್ತಿ ಇಲ್ಲದಿರುವ ಕುರಿತು, ಕೊಡಗನ್ನು ಬರಪೀಡಿತ ಪ್ರದೇಶವೆಂದು ಗುರುತಿಸಲು ಹಾಗೂ ಕಸ್ತೂರಿರಂಗನ್ ವರದಿ ವ್ಯಾಪ್ತಿಯಿಂದ ಕೊಡಗನ್ನು ಹೊರಗಿಡಬೇಕಾಗಿರುವ ಬಗ್ಗೆ ಸಂಬAಧಿಸಿದ ಇಲಾಖೆಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದ್ದನ್ನು ನಿರ್ಣಯಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕರಾದ ಕೆ.ಟಿ. ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಕೆ.ಎಂ. ತಮ್ಮಯ್ಯ, ವಿ.ಕೆ. ಅಜಯ್ ಕುಮಾರ್, ಎ.ಎಸ್. ಶ್ಯಾಮ್ಚಂದ್ರ, ಎಂ.ಎA. ಶ್ಯಾಮಲ, ಎ.ಸಿ. ಕುಶಾಲಪ್ಪ, ಎಂ.ಟಿ. ಸುಬ್ಬಯ್ಯ, ಎ.ಎಂ. ಮುತ್ತಪ್ಪ, ಪಿ.ಎನ್. ಚಂದ್ರಪ್ರಕಾಶ್, ವಿ.ಸಿ. ಅಮೃತ್, ಎಸ್.ಆರ್. ಸುನಿಲ್ ರಾವ್, ಹೆಚ್.ಎಂ. ರಮೇಶ್, ಸಹಕಾರ ಸಂಘಗಳ ಉಪನಿಬಂಧಕಿ ಶೈಲಜ ಉಪಸ್ಥಿತರಿದ್ದರು. ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರು. ಯೂನಿಯನ್ ನಿರ್ದೇಶಕ ಹೆಚ್.ಕೆ. ಮಾದಪ್ಪ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ವಂದಿಸಿದರು.