ಗೋಣಿಕೊಪ್ಪಲು, ಸೆ. ೨೧: ಹಾತೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಿತು. ೫೦ ವರ್ಷ ತುಂಬಿದ ಸವಿನೆನಪಿಗಾಗಿ ಸಂಘದ ಆವರಣದಲ್ಲಿ ರೂ. ೨೦ ಲಕ್ಷ ವೆಚ್ಚದ ನೂತನ ವಸತಿ ಗೃಹ ಹಾಗೂ ರೂ. ೨೫ ಲಕ್ಷ ವೆಚ್ಚದ ನೂತನ ಗೋದಾಮನ್ನು ಈ ಸಂದರ್ಭ ಲೋಕಾರ್ಪಣೆ ಮಾಡಲಾಯಿತು.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಪೇಕ್ಸ್ ಬ್ಯಾಂಕಿನ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್, ಹಾಲಿ ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣವಟ್ಟಿರ ಬೆಳ್ಳಿಯಪ್ಪ ನೂತನ ಗೋದಾಮನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸಹಕಾರ ಸಂಘವು ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ. ಹಾತೂರು ಸಂಘವು ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ, ಸಿಬ್ಬಂದಿಗಳ ಕಾರ್ಯವೈಖರಿಗೆ ರಾಜ್ಯದಲ್ಲಿಯೇ ಹೆಸರುಗಳಿಸುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆÀದು ಗಮನ ಸೆಳೆದಿದೆ.
ಹಿರಿಯರು ಕಟ್ಟಿ ಬೆಳೆಸಿದ ಸಂಘವನ್ನು ಪ್ರಸ್ತುತ ಆಡಳಿತ ಮಂಡಳಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿರುವುದಕ್ಕೆ ಅಪಾರ ಸಂಖ್ಯೆಯಲ್ಲಿ ಸೇರಿರುವ ಸಂಘದ ಸದಸ್ಯರುಗಳೇ ಸಾಕ್ಷಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಗÀಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಸಂಘವು ಪ್ರಗತಿಯತ್ತ ಸಾಗುತ್ತಿರುವುದಕ್ಕೆ ಇಲ್ಲಿನ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ೧೯೭೬ರಲ್ಲಿ ಸ್ಥಾಪನೆಯಾದ ಸಂಘವು ಸುದೀರ್ಘ ೫೦ ವರ್ಷಗಳ ನಡಿಗೆಯಲ್ಲಿ ಹಲವು ಏಳು ಬೀಳುಗಳ ನಡುವೆ ಸದಸ್ಯರ ಬೇಕು ಬೇಡಿಕೆಗಳನ್ನು ಈಡೇರಿಸುತ್ತಾ ಪ್ರಗತಿಯತ್ತ ಸಾಗುತ್ತಿದೆ ಎಂದರು. ಸುವರ್ಣ ಮಹೋತ್ಸವದ ಅಂಗವಾಗಿ ಸಂಘವನ್ನು ಈ ಹಿಂದೆ ಮುನ್ನಡೆಸಿದ್ದ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ, ತೀತಮಾಡ ಕುಶಾಲಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ವಸತಿ ಗೃಹವನ್ನು ಆಡಳಿತ ಮಂಡಳಿಯವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಎಸ್.ಕೆ. ಮಂದಣ್ಣ, ಹೆಚ್.ಡಿ. ಶ್ರೀನಿವಾಸ್, ಕೆ.ಬಿ. ಉತ್ತಪ್ಪ, ಎಂ.ಟಿ. ಅಯ್ಯಪ್ಪ, ಪಿ.ಡಿ. ದಿನೇಶ್, ಕೊಲ್ಲಿರ ಗೋಪಿ ಚಿಣ್ಣಪ್ಪ, ಟಿ.ಎಸ್. ಗಣಪತಿ, ಬಿ.ಪಿ. ದಿನೇಶ್, ಚೇಂದAಡ ಜೆ. ರೂಪ, ಪಟ್ರಂಗಡ ಎಸ್. ಗಂಗಮ್ಮ, ಸಿಇಒ ಎಂ.ಎಸ್. ಪ್ರತಿಮ, ಉಪಸ್ಥಿತರಿದ್ದರು. ಆರಂಭದಲ್ಲಿ ನಿರ್ದೇಶಕರಾದ ಕೊಲ್ಲಿರ ಗೋಪಿ ಚಿಣ್ಣಪ್ಪ ಸ್ವಾಗತಿಸಿ, ಸಂಘದ ಪ್ರಬಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಪ್ರತಿಮಾ ನಿರೂಪಿಸಿ, ವಂದಿಸಿದರು.