ಸುಂಟಿಕೊಪ್ಪ, ಸೆ. ೨೧: ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ೮ನೇ ವರ್ಷದ ಗೌರಿ ಗಣೇಶೋತ್ಸವ ಅಂಗವಾಗಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಚೌತಿಯಂದು ಬೆಳಿಗ್ಗೆ ೧೧.೩೦ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಂಜೆ ೬ ಗಂಟೆಯಿAದ ಕೊಡಗರಹಳ್ಳಿ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಮೀಪದ ೭ನೇ ಹೊಸಕೋಟೆ ಗಳೆಯರ ಬಳಗದ ವತಿಯಿಂದ ಗಣೇಶ ಮೂರ್ತಿಯನ್ನು ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ಎಮ್ಮೆಗುಂಡಿ ಶ್ರೀ ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ ೨ನೇ ವರ್ಷದ ಗೌರಿ ಗಣೇಶೋತ್ಸವವು ಅದ್ಧೂರಿಯಾಗಿ ನಡೆಯಿತು.

ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ಗಣಹೋಮ ಮತ್ತು ವಿಶೇಷ ಪೂಜಾ ವಿಧಿವಿಧಾನಗಳು ನಡೆದವು. ಇದೇ ವೇಳೆ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ತೀರ್ಥ ಪ್ರಸಾದದೊಂದಿಗೆ ಭಕ್ತಾದಿಗಳಿಗೆ ಲಘುಉಪಹಾರ ನೀಡಲಾಯಿತು.

ಸಮೀಪದ ಹೊರೂರು ಮಠದಲ್ಲಿ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಪ್ರತಿಷ್ಠಾಪನೆಯು ನಡೆಯಿತು. ದಿನದ ಅಂಗವಾಗಿ ಸ್ಥಳ ಶುದ್ಧಿ, ಗಣಹೋಮ, ವಿವಿಧ ಅಲಂಕಾರ ಪೂಜೆಗಳು ನಡೆದು ಮಧ್ಯಾಹ್ಮ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಕೆದಕಲ್ ಗ್ರಾಮದ ಮಹದೇಶ್ವರ ಈಶ್ವರ ದೇವಾಲಯದಲ್ಲಿ ಬಾಲಕ ಭಕ್ತ ಮಂಡಳಿ ವತಿಯಿಂದ ೧೪ ನೇ ವರ್ಷದ ಗಣೇಶೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ಹರದೂರು, ಕಾನ್‌ಬೈಲ್, ಮತ್ತಿಕಾಡು ಸೇರಿದಂತೆ ವಿವಿಧೆಡೆಗಳಲ್ಲಿ ಗೌರಿಗಣೇಶ ಮೂರ್ತಿಯ ಪ್ರತಿಷ್ಟಾಪನಾ ಪೂಜೆಗಳು ನಡೆದವು.

ಕಾಂಡನಕೊಲ್ಲಿಯ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ ಸಂಜೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ಗ್ರಾಮದಾದ್ಯಂತ ಸಂಚರಿಸಿ ರಾತ್ರಿ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು.

ಸಮೀಪದ ಕೆದಕಲ್ ಗ್ರಾಮದ ಮಹಾದೇವ ಈಶ್ವರ ದೇವಾಲಯದಲ್ಲಿ ಸಂಜೆ ನೂರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಸರ್ಜನಾ ಮೆರವಣಿಗೆ ನಡೆದು ಸ್ಥಳೀಯ ಕೆರೆಯಲ್ಲಿ ವಿಸರ್ಜಿಸಲಾಯಿತು.