ಮಡಿಕೇರಿ, ಸೆ. ೨೧: ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ವಲಯ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಸಹಾಯ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ವರ್ಗದ ಮೀನು ಕೃಷಿಕರಿಗೆ ಮೀನು ಹಿಡಿಯುವ ಸಲಕರಣೆಗಳನ್ನು ಉಚಿತವಾಗಿ ವಿತರಿಸಲು ಸೇವಾ ಸಿಂಧು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮೀನುಗಾರರಿಗೆ/ ಮೀನು ಕೃಷಿಕರಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ ೫ರ ಸಂಜೆ ೫.೩೦ ಗಂಟೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಪೂರ್ಣ/ ಅರೆಕಾಲಿಕ ಮೀನುಗಾರರಾಗಿರಬೇಕು. ಕೊಡಗು ಜಿಲ್ಲೆಯಲ್ಲಿ ನೆಲೆಸಿರಬೇಕು. ಅರ್ಜಿಯೊಂದಿಗೆ ಭಾವಚಿತ್ರ-೨, ವಿಳಾಸ ಪುರಾವೆ ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ನೂತನ ಆರ್‌ಡಿ ಸಂಖ್ಯೆ ಒಳಗೊಂಡಿರಬೇಕು). ಮೀನುಗಾರಿಕೆಯಲ್ಲಿ ತೊಡಗಿರುವ ಕುರಿತು ದೃಢೀಕರಣ ಪ್ರಮಾಣ ಪತ್ರ/ಪರವಾನಗಿ ಪ್ರತಿ, ಪಡಿತರ ಚೀಟಿ ಅಥವಾ ಇತರೆ ದಾಖಲಾತಿಗಳ ಪ್ರತಿ ಸಲ್ಲಿಸಬೇಕು. ನಿಗದಿಪಡಿಸಿರುವ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದಲ್ಲಿ ಜಿಲ್ಲಾ ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಆಯ್ಕೆ ಸಮಿತಿಯಿಂದ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಕಚೇರಿಯ ಸಮಯದಲ್ಲಿ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಚಿನ್ ತಿಳಿಸಿದ್ದಾರೆ.