ಮಡಿಕೇರಿ, ಸೆ. ೨೧: ನಗರದ ಕೊಡಗು ವಿದ್ಯಾಲಯದಲ್ಲಿ ೩ನೇ ತರಗತಿ ವಿದ್ಯಾರ್ಥಿಗಳು ಗಣೇಶ ಚತುರ್ಥಿಯನ್ನು ಭಕ್ತಿ ಭಾವ, ಮತ್ತು ಸಡಗರದಿಂದ ಆಚರಿಸಿದರು.

ಶಾಲೆಯ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ತಯಾರಿಸಿ, ಪೂಜಿಸಿ ನಂತರ ವಿಸರ್ಜನೆ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮಣ್ಣಿನ ಗಣಪತಿ ತಯಾರಿಕೆ ಹಾಗೂ ವಿಸರ್ಜನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.

ಶಿಕ್ಷಕಿ ಬೊಳ್ಳಮ್ಮ ಗಣೇಶ ಚತುರ್ಥಿಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪರಿಸರ ಮಹತ್ವವನ್ನು ವಿವರಿಸಿದರು. ಶಾರ್ವಿ ಭಾರತ್ ಗಣೇಶ ಚತುರ್ಥಿಯ ಮಹತ್ವದ ಕುರಿತು ಮಾತನಾಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ “ಗಣಪತಿಗೆ ಆನೆ ಮೊಗವು ಹೇಗೆ ಬಂತು” ಎಂಬ ಪೌರಾಣಿಕ ಕಥೆಯನ್ನು ಆಧರಿಸಿದ ನಾಟಕವನ್ನು ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದರು. ನಾಟಕ, ನೃತ್ಯ ಹಾಗೂ ಹಾಡುಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಮೆಚ್ಚುಗೆಗೆ ಪಾತ್ರರಾದರು. ಗಣೇಶನ ಕುರಿತಾದ ನೃತ್ಯ ಹಾಗೂ ಹಾಡುಗಳು ಗಮನ ಸೆಳೆದವು

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್., ಆಡಳಿತ ಮುಖ್ಯಸ್ಥರಾದ ರವಿ ಪಿ. ಶಿಕ್ಷಕರು ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ನೀಡಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಕಿರಾ ನಂದನ್ ಹಾಗೂ ಚಾರ್ವಿ ನಿರೂಪಿಸಿದರು. ಆರನ್ ಪೊನ್ನಪ್ಪ ಸ್ವಾಗತಿಸಿ, ಫಸೀಲಾ ಫಾತಿಮಾ ಶೇಖ್ ವಂದಿಸಿದರು.