ಕುಶಾಲನಗರ, ಸೆ.೨೦: ಸಾಕಾನೆ ಶಿಬಿರದ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರ ಭೇಟಿಗೆ ಭಾನುವಾರದಿಂದ ಅವಕಾಶ ಕಲ್ಪಿಸಲಾಗಿದೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಶಿಬಿರದ ಸ್ವಾಗತ ಕೇಂದ್ರದಲ್ಲಿ ಪ್ರವಾಸಿಗರಿಗೆ ಟಿಕೆಟ್ ವಿತರಿಸುವ ಮೂಲಕ ಭೇಟಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಈ ಹಿಂದೆ ಶಿಬಿರದಲ್ಲಿ ಸಂಭವಿಸಿದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಗತ್ಯ ಸುರಕ್ಷತಾ ಕ್ರಮಗಳನ್ನು ರೂಪಿಸಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸದAತೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಶಿಬಿರಕ್ಕೆ ಭೇಟಿ ನೀಡುವವರು ಆನೆಗಳಿಗೆ ಯಾವುದೇ ರೀತಿಯಲ್ಲಿ ಕಿರಿಕಿರಿ ಉಂಟುಮಾಡದAತೆ ಎಚ್ಚರಿಕೆ ವಹಿಸಬೇಕು. ಶಿಬಿರದ ಸುರಕ್ಷತಾ ಕ್ರಮಗಳಿಗೆ ಸಹಕರಿಸುವ ಮೂಲಕ ದುಬಾರೆ ಆನೆ ಶಿಬಿರವನ್ನು ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕಳೆದ ಮೇ ತಿಂಗಳಲ್ಲಿ ಎರಡು ಆನೆಗಳ ನಡುವಿನ ಕಾಳಗದಲ್ಲಿ ಸಿಲುಕಿ ಪ್ರವಾಸಿ ಮಹಿಳೆ ಮೃತಪಟ್ಟಿದ್ದ ಘಟನೆ ಹಾಗೂ ಒಂದು ಆನೆ ಗಾಯಗೊಂಡು ಮೃತಪಟ್ಟಿರುವುದು ವಿಷಾದನೀಯ. ಇಂತಹ ಅನಾಹುತಗಳು ಮರುಕಳಿಸದಂತೆ ಪ್ರತಿಯೊಬ್ಬರೂ ಕಾಳಜಿ ಹಾಗೂ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
ಶಿಬಿರದ ಸುರಕ್ಷತಾ ವ್ಯವಸ್ಥೆಗಳ ಕುರಿತು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಅವರಿಂದ ಶಾಸಕರು ಮಾಹಿತಿ ಪಡೆದರು. ಮೃತ ಪ್ರವಾಸಿ ಮಹಿಳೆಯ ನೆನಪಿಗಾಗಿ ಶಿಬಿರದಲ್ಲಿರುವ ಆನೆಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡುವ ಕುರಿತು ಅರಣ್ಯ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಎರಡು ಆನೆಗಳ ಕಾದಾಟದಲ್ಲಿ ಸಿಲುಕಿ ದುರ್ಘಟನೆಯಲ್ಲಿ ಮೃತಪಟ್ಟ ಪ್ರವಾಸಿ ಮಹಿಳೆಯ ನೆನಪಿಗಾಗಿ ಹೆಸರನ್ನು ಶಿಬಿರದ ಆನೆ ಒಂದಕ್ಕೆ ನಾಮಕರಣ ಮಾಡುವಂತೆ ಮಂತರ್ ಗೌಡ ಅರಣ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಶಿಬಿರವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವ ಮುನ್ನ ಅಗತ್ಯವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾರಂಭಿಕ ಹಂತದಲ್ಲಿ ಪ್ರತಿದಿನ ಬೆಳಗ್ಗೆ ೯.೩೦ರಿಂದ ೧೧.೩೦ರವರೆಗೆ ಎರಡು ಗಂಟೆಗಳ ಕಾಲ ಪ್ರವಾಸಿಗರಿಗೆ ಶಿಬಿರ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದರು. ಒಂದು ತಂಡದಲ್ಲಿ ಗರಿಷ್ಠ ೧೫೦ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುವುದು. ತಂಡಗಳಾಗಿ ಪ್ರವಾಸಿಗರನ್ನು ಶಿಬಿರದೊಳಗೆ ಕರೆದೊಯ್ಯಲಾಗುವುದು. ಪ್ರಸ್ತುತ ಶಿಬಿರದಲ್ಲಿರುವ ೧೦ ಆನೆಗಳನ್ನು ಮಾತ್ರ ಪ್ರವಾಸಿಗರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಮಂಗಳವಾರ ಶಿಬಿರಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು, ಅಂದು ಶಿಬಿರದ ನಿರ್ವಹಣೆ ಹಾಗೂ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸಂಬAಧಿತ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಪ್ರವಾಸಿಗರ ಭೇಟಿಯ ಅವಧಿಯನ್ನು ಹೆಚ್ಚಿಸುವ ಕುರಿತು ಚಿಂತಿಸಲಾಗುವುದು ಎಂದರು.
ಶಿಬಿರದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಮೂರು ವಲಯಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ಹಸಿರು ವಲಯದಿಂದ ೧೦ ಮೀಟರ್ ಅಂತರದಲ್ಲಿ ಆನೆಗಳನ್ನು ವೀಕ್ಷಿಸಬಹುದಾಗಿದೆ. ಆನೆಗಳೊಂದಿಗೆ ಯಾವುದೇ ರೀತಿಯ ಇತರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಪ್ರವಾಸಿಗರು ಪಾಲಿಸಬೇಕಾದ ನಿಯಮಗಳು ಹಾಗೂ ಸುರಕ್ಷತಾ ಸೂಚನೆಗಳನ್ನು ಶಿಬಿರದ ವಿವಿಧೆಡೆ ಫಲಕಗಳ ಮೂಲಕ ಅಳವಡಿಸಲಾಗಿದ್ದು, ಧ್ವನಿವರ್ಧಕಗಳ ಮೂಲಕವೂ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ.
ಶಿಬಿರಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಆಗಮಿಸಿದ್ದರು. ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ಆನೆಗಳನ್ನು ನಿಗದಿತ ಅಂತರದಿAದಲೇ ವೀಕ್ಷಿಸುತ್ತಿರುವ ದೃಶ್ಯ ಕಂಡುಬAತು.
ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್, ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್, ವೆಂಕಟೇಶ್ ನಲವಡೆ, ಅರಣ್ಯ ಸಿಬ್ಬಂದಿ, ಮಾವುತರು, ಕಾವಾಡಿಗರು, ದುಬಾರೆ ರಾಫ್ಟಿಂಗ್ ಅಸೋಸಿಯೇಷನ್ನ ಪ್ರತಿನಿಧಿಗಳು, ಸಲಹೆಗಾರ ಕೆ.ಎಸ್. ರತೀಶ್, ನಂಗಾರು ಜಗ, ವಸಂತ್, ರಾಜೇಶ್, ವಿಜು ಚೆಂಗಪ್ಪ, ಅಪ್ಪು, ಸುನಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. - ಚಂದ್ರಮೋಹನ್