ಚೆಯ್ಯಂಡಾಣೆ, ಸೆ. ೨೦: ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಷನ್) ವೀರಾಜಪೇಟೆಯ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ವಾಟೇರಿರ ಪಿ.ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಕೊಡಗು ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಟೇರಿರ ಪಿ. ಬೋಪಣ್ಣ ಅವರು, ಸಂಘದ ಪ್ರಗತಿ, ವಾರ್ಷಿಕ ವ್ಯಾಪಾರ ವಹಿವಾಟು ಹಾಗೂ ಮುಂದಿನ ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು. ಸಂಘವು ಪ್ರಸಕ್ತ ಸಾಲಿನಲ್ಲಿ ಸುಮಾರು ರೂ.೧೬.೧೫ ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಸುಮಾರು ರೂ.೩ ಕೋಟಿ ವ್ಯಾಪಾರ ವೃದ್ಧಿ ಸಾಧಿಸಿದೆ ಎಂದು ತಿಳಿಸಿದರು. ಸಂಘವು ರೂ.೯೦.೧೦ ಲಕ್ಷದಷ್ಟು ಲಾಭ ಗಳಿಸಿದ್ದು, ನಿವ್ವಳ ಲಾಭವು ರೂ.೨೮.೯ ಲಕ್ಷ ಎಂದು ಸಭೆಗೆ ಮಾಹಿತಿ ನೀಡಿದರು.

ಮಲಬಾರ್ ರಸ್ತೆಯಲ್ಲಿ ಹಾರ್ಡ್ವೇರ್ ಮಳಿಗೆ ಕಾರ್ಯನಿರ್ವಹಿಸುತ್ತಿದ್ದು, ಕಳೆದ ೨೫ ವರ್ಷಗಳಿಂದ ಕೋವಿ ಮಾರಾಟ ಪರವಾನಗಿ ಹೊಂದಿರುವ ಸಂಘವು ಇತ್ತೀಚೆಗೆ ಫೆಡರೇಷನ್ ವಾಣಿಜ್ಯ ಕಟ್ಟಡದಲ್ಲಿ ನೂತನ ಕೋವಿ ಮಾರಾಟ ಮಳಿಗೆಯನ್ನು ಆರಂಭಿಸಿದೆ.

ರೂ.೨೨ ಲಕ್ಷದಿಂದ ಆರಂಭಗೊAಡ ಕ್ಷೇಮ ನಿಧಿಯು ಪ್ರಸ್ತುತ ರೂ.೧.೧೦ ಕೋಟಿಗೆ ಏರಿಕೆಯಾಗಿದೆ. ಸಂಘವು ಸುಮಾರು ರೂ.೬೫ ಲಕ್ಷ ಹೂಡಿಕೆ ಮಾಡಿದ್ದು, ಇದರಿಂದ ಮುಂದಿನ ದಿನಗಳಲ್ಲಿ ರೂ.೭ ಲಕ್ಷಕ್ಕೂ ಅಧಿಕ ಲಾಭ ನಿರೀಕ್ಷಿಸಲಾಗಿದೆ . ಇದಲ್ಲದೆ, ಮಲಬಾರ್ ರಸ್ತೆಯಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರ ಹಾಗೂ ಹತ್ಯಾರು ವಿಭಾಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಹಕಾರಿ ಬಂಧುಗಳ ಸಹಕಾರದಿಂದ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಸಂಘದ ವ್ಯಾಪಾರದಲ್ಲಿ ಪ್ರಸ್ತುತ ಸಹಕಾರಿ ಬಂಧುಗಳ ಪಾಲು ಸುಮಾರು ೧೦ರಿಂದ ೧೫ರಷ್ಟು ಇದ್ದು, ಮುಂದಿನ ದಿನಗಳಲ್ಲಿ ಇದನ್ನು ೩೦ರಿಂದ ೪೦ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಸಹಕಾರಿ ಸಂಘಗಳು ಮತ್ತು ಸದಸ್ಯರು ಫೆಡರೇಷನ್‌ನಿಂದಲೇ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರ ನಡೆಸುವ ಮೂಲಕ ಸಂಘದ ಮತ್ತಷ್ಟು ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸದಸ್ಯರು ಸಂಘದ ಕಾರ್ಯಚಟುವಟಿಕೆಗಳ ಕುರಿತು ತಮ್ಮ ಅಭಿಪ್ರಾಯ, ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ನಿಧನರಾದ ಸಂಘದ ಸದಸ್ಯರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಸಂಘದ ಕಾರ್ಯದರ್ಶಿ ಮಂಡಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ತಾತಂಡ.ಎA. ಕಾವೇರಪ್ಪ, ನಿರ್ದೇಶಕರಾದ ಕಂಜಿತAಡ ಕೆ.ಮಂದಣ್ಣ, ಮುಳ್ಳೆಂಗಡ ಎಂ.ಕುಟ್ಟಪ್ಪ, ಚೇನಂಡ ಗಿರೀಶ್ ಪೂಣಚ್ಚ, ಮಾಚಿಮಂಡ ಬಿ.ವಸಂತ, ಕುಂಬೇರ ಎ.ಮನುಕುಮಾರ್, ಮುಕೊಂಡ ಪಿ. ಶಶಿ ಸುಬ್ರಮಣಿ, ಕೂತಂಡ ಬಿ.ಸಚಿನ್ ಕುಟ್ಟಯ್ಯ, ಪುಲಿಯಂಡ ಪೊನ್ನಣ್ಣ, ಕೇತಂಬಿರ ಬಿ.ಲತಾ, ಮುಕ್ಕಾಟಿರ ವಿದ್ಯಾ, ಕೆ.ಆರ್. ಮಹೇಶ್, ವಿನೋದ್, ಶೇಖರ್ ಮತ್ತು ಹೆಚ್.ಎ. ಆನಂದ ಉಪಸ್ಥಿತರಿದ್ದರು.