ಪೊನ್ನಂಪೇಟೆ, ಸೆ. ೨೦: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತವು ೨೦೨೫-೨೬ನೇ ಸಾಲಿನಲ್ಲಿ ರೂ.೧೨೭.೪೪ ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ.೧೦೮.೯೨ ಲಕ್ಷ ಕ್ರೋಢೀಕೃತ ವ್ಯಾಪಾರ ಲಾಭ ಹಾಗೂ ರೂ.೪೬ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮುದ್ದಿಯಡ ಡಿ. ಮಂಜು ಗಣಪತಿ ತಿಳಿಸಿದರು.
ಪೊನ್ನಂಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಕಾರ್ಯಕ್ಷೇತ್ರವು ಪೊನ್ನಂಪೇಟೆ ನಾಡಿನ ೧೫ ಹಾಗೂ ಶ್ರೀಮಂಗಲ ನಾಡಿನ ೬ ಗ್ರಾಮಗಳು ಸೇರಿದಂತೆ ಒಟ್ಟು ೨೧ ಗ್ರಾಮಗಳನ್ನು ಒಳಗೊಂಡಿದೆ. ರೈತರಿಗೆ ಅಗತ್ಯವಿರುವ ಗುಣಮಟ್ಟದ ಕೃಷಿ ಉಪಕರಣಗಳು, ರಸಗೊಬ್ಬರ, ಕೀಟನಾಶಕ ಹಾಗೂ ಇತರ ಕೃಷಿ ಪರಿಕರಗಳನ್ನು ಸಂಘದ ಮೂಲಕ ಒದಗಿಸಲಾಗುತ್ತಿದೆ ಎಂದರು.
ರೈತರ ಅನುಕೂಲಕ್ಕಾಗಿ ೧,೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ಗೊಬ್ಬರ ಗೋದಾಮು ನಿರ್ಮಿಸಲಾಗಿದೆ. ಭತ್ತ, ಕಾಫಿ ಹಾಗೂ ಕಾಳುಮೆಣಸು ಸೇರಿದಂತೆ ರೈತರ ಉತ್ಪನ್ನಗಳನ್ನು ದಾಸ್ತಾನು ಮಾಡಲು ಸುಸಜ್ಜಿತ ಗೋದಾಮು ವ್ಯವಸ್ಥೆ ಇದ್ದು, ಉತ್ಪನ್ನಗಳ ಆಧಾರದ ಮೇಲೆ ರೈತ ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಕಾಫಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕಾಫಿ ಹಲ್ಲಿಂಗ್ ಘಟಕವನ್ನು ಆರಂಭಿಸಲಾಗಿದೆ. ಸಂಘವು ೧.೮೦ ಎಕರೆ ವಿಸ್ತೀರ್ಣದ ಕಾಫಿ ತೋಟವನ್ನೂ ಹೊಂದಿದೆ. ಸದಸ್ಯರ ಅನುಕೂಲಕ್ಕಾಗಿ ೨ ಟಿಪಿಹೆಚ್ ಸಾಮರ್ಥ್ಯದ ನೂತನ ಅಕ್ಕಿ ಗಿರಣಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಮಂಜು ಗಣಪತಿ ತಿಳಿಸಿದರು.
ಪ್ರಸ್ತುತ ಸಂಘದಲ್ಲಿ ೩,೪೨೨ ಸದಸ್ಯರಿದ್ದು, ಸದಸ್ಯರ ಪಾಲು ಬಂಡವಾಳ ರೂ.೧೭೪.೩೧ ಲಕ್ಷವಾಗಿದೆ. ಕ್ಷೇಮನಿಧಿ ರೂ.೧೫೬.೧೬ ಲಕ್ಷ ಹಾಗೂ ಇತರ ಠೇವಣಿ ಮತ್ತು ನಿಧಿಗಳು ಸೇರಿದಂತೆ ಒಟ್ಟು ರೂ.೯೭೬.೩೦ ಲಕ್ಷವಿದೆ. ಇತರ ಸಂಸ್ಥೆಗಳಲ್ಲಿ ಪಾಲು ಹಾಗೂ ಠೇವಣಿ ರೂಪದಲ್ಲಿ ರೂ.೨೨೧.೬೪ ಲಕ್ಷ ಹೂಡಿಕೆ ಮಾಡಲಾಗಿದೆ. ಸಂಘದ ಚರ ಮತ್ತು ಸ್ಥಿರಾಸ್ತಿಗಳ ಒಟ್ಟು ಮೌಲ್ಯ ರೂ.೩೯೪.೦೧ ಲಕ್ಷವಾಗಿದೆ ಎಂದು ವಿವರಿಸಿದರು.
೨೦೨೫-೨೬ನೇ ಸಾಲಿನ ಲಾಭದಲ್ಲಿ ಸದಸ್ಯರ ಷೇರು ಮೊತ್ತಕ್ಕೆ ಶೇ.೧೫ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘವು ಸತತವಾಗಿ ‘ಎ’ ತರಗತಿಯ ಆಡಿಟ್ ವರ್ಗೀಕರಣವನ್ನು ಕಾಯ್ದುಕೊಂಡು ಬಂದಿದೆ ಎಂದು ಹೇಳಿದರು. ಸಂಘದ ೨೦೨೫-೨೬ನೇ ಸಾಲಿನ ೯೦ನೇ ವಾರ್ಷಿಕ ಮಹಾಸಭೆಯು ತಾ. ೨೫ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ. ವರ್ಷಂಪ್ರತಿ ನೀಡುವಂತೆ ೭ ನೇ ತರಗತಿ, ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಮಹಾಸಭೆಯಲ್ಲಿ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬೊಟ್ಟಂಗಡ ಎಸ್. ದಶಮಿ ದೇಚಮ್ಮ, ನಿರ್ದೇಶಕರಾದ ಮುದ್ದಿಯಡ ಎ. ಸೋಮಯ್ಯ, ಜೋಡುಮಾಡ ಪಿ. ಶ್ಯಾಮ್, ಐನಂಡ ಕೆ. ಬೋಪಣ್ಣ, ಪದಾರ್ಥಿ ಎಸ್. ಮಂಜುನಾಥ್, ಮಾಚಂಗಡ ಬಿ. ಮೊಣ್ಣಪ್ಪ, ಮೂಕಳೇರ ಬಿ. ರಮೇಶ್, ಬೋಡಂಗಡ ಟಿ. ಜಗದೀಶ್, ಮೂಕಳೇರ ಪಿ. ಶಾರದ, ಬಿ.ಎಸ್. ಚಂದ್ರಶೇಖರ್ (ರಾಜ), ಹೆಚ್.ಹೆಚ್. ತಮ್ಮಯ್ಯ, ಹಾಲುಮತದ ಎಂ. ಡಿಕ್ಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಕಳೇರ ಟಿ. ಪೂನಂ ಉಪಸ್ಥಿತರಿದ್ದರು.