ಮಡಿಕೇರಿ, ಸೆ.೨೦: ಚೆಂಬು ಗ್ರಾಮಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

ಚೆಂಬು ಗ್ರಾಮದ ಏಣಿಯಾರು-ಉಂಬಳೆ ಭಾಗದ ರಸ್ತೆ ಅಭಿವೃದ್ಧಿಗೆ ಶಾಸಕರ ವಿಶೇಷ ಅನುದಾನದಡಿ ಮಂಜೂರಾಗಿದ್ದ ರೂ. ೫೦ ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕರು ರಸ್ತೆ ಕಾಮಗಾರಿಯನ್ನು ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳಿಸಿದರು.

ಇದೇ ರಸ್ತೆಯ ಮುಂದುವರಿದ ಭಾಗದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ೫ ಲಕ್ಷ ಅನುದಾನ ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದನ್ನೂ ಶಾಸಕರು ಉದ್ಘಾಟಿಸಿದರು.

ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೌಕತ್ ಆಲಿ, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಸುರೇಶ್ ಸಂಪಾಜೆ, ಚೆನಿಯಪ್ಪ ಕುದುರೆಪಾಯ, ಚೆನ್ನಪ್ಪ ಕುದುರೆಪಾಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.