ವರದಿ : ಚಂದ್ರಮೋಹನ್
ಕುಶಾಲನಗರ, ಸೆ. ೨೦: ಕುಶಾಲನಗರ-ಮಡಿಕೇರಿ ಹೆದ್ದಾರಿ ನಡುವಿನ ಆನೆಕಾಡುವಿನಲ್ಲಿ ಭೀಕರ ಸರಣಿ ವಾಹನ ಅಪಘಾತ ಸಂಭವಿಸಿದ್ದು, ಪರಿಣಾಮ ಮೂವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ದುರ್ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಬೈಕ್ ಸವಾರ, ಅರಣ್ಯ ಇಲಾಖೆ ಸಿಬ್ಬಂದಿ ಮೂರ್ನಾಡು ಸಮೀಪದ ಹೊದ್ದೂರು ನಿವಾಸಿ ಕುಮಾರ್ (೪೨), ಕಾರು ಚಲಾಯಿಸುತ್ತಿದ್ದ ೭ನೇ ಹೊಸಕೋಟೆಯ ರತನ್ ಉಣ್ಣಿ (೩೬), ಕಾರಿನಲ್ಲಿದ್ದ ೭ನೇ ಹೊಸಕೋಟೆಯ ಆದರ್ಶ್ (೨೬) ಹಾಗೂ ಮೃತ ದುರ್ದೈವಿಗಳು. ಇದರೊಂದಿಗೆ ೭ ಮಂದಿ ಗಂಭೀರ ಗಾಯಗೊಂಡಿದ್ದು, ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಐವರನ್ನು ಮೈಸೂರಿಗೆ, ಮೂವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಕೇರಳ ನೋಂದಣಿಯ ಪಿಕಪ್ನಲ್ಲಿದ್ದ ಕೇರಳದ ಮಧು ಹಾಗೂ ನಿವೇದ್ ಸೇರಿದಂತೆ ಕಾರಿನಲ್ಲಿದ್ದ ನಂಜರಾಯಪಟ್ಟಣದ ಅಜಯ್, ೭ನೇ ಹೊಸಕೋಟೆಯ ಚಂದ್ರಶೇಖರ್, ಕೊಡಗರಹಳ್ಳಿಯ ಅಖಿಲ್, ಸುಬಿನ್, ನಿಶಾಂತ್ ಗಂಭೀರ ಗಾಯಗೊಂಡವರಾಗಿದ್ದಾರೆ. ಕಾರಿನಲ್ಲಿದ್ದವರು ಕುಶಾಲನಗರ ಮಾರ್ಗದಿಂದ ೭ನೇ ಹೊಸಕೋಟೆ ಕಡೆ ಹಾಗೂ ಬೈಕ್ನಲ್ಲಿದ್ದವರು ತನ್ನ ಪತ್ನಿಯ ಮನೆ ಕೊಪ್ಪಕ್ಕೆ ತೆರಳುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ ವೇಳೆ ಸಂಭವಿಸಿದ ಅಪಘಾತದಿಂದ ವಾಹನಗಳು ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆಯನ್ನು ತೋರಿಸುತ್ತಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್÷ ಕಾರು ಹಾಗೂ ಪಿಕಪ್ ಅಪ್ಪಚ್ಚಿಯಾಗಿದ್ದು, ವಾಹನದೊಳಗಿದ್ದವರು ಗಂಭೀರ ಗಾಯಗೊಂಡು ವಾಹನಗಳಲ್ಲಿಯೇ ಸಿಲುಕಿಕೊಂಡಿದ್ದರು. ಸ್ಥಳೀಯರು ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು,
೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ಸಂಚಾರಿ ವಿಭಾಗದ ಉಪನಿರೀಕ್ಷಕಿ ಗೀತಾ, ಠಾಣಾಧಿಕಾರಿ ಶ್ರೀನಿವಾಸ್, ಸಿಬ್ಬಂದಿ ಮೋಹನ್ ಕುಮಾರ್, ಸಿದ್ದರಾಜು, ಕೃಷ್ಣಶೆಟ್ಟಿ, ವಿಶ್ವನಾಥ್, ಸುಮಂತ್ ಸೇರಿದಂತೆ ೭ನೇ ಹೊಸಕೋಟೆಯ ಜಿಷ್ಣು ಸೇರಿದಂತೆ ಸಹಕಾರದಿಂದ ವಾಹನದಲ್ಲಿದ್ದವರನ್ನು ಹೊರತೆಗೆದು ಕುಶಾಲನಗರದ ಆಸ್ಪತ್ರೆಗೆ ರವಾನಿಸಿದ್ದಾರೆ. ಕುಮಾರ್ ಹಾಗೂ ರತನ್ ಉಣ್ಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆದರ್ಶ್ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗಮಧ್ಯೆ ಹುಣಸೂರಿನಲ್ಲಿ ಕೊನೆಯುಸಿರೆಳಿದ್ದಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ತಸಿಕ್ತರಾಗಿದ್ದವರನ್ನು ಹೊರತೆಗೆದು ಕೆಲವರನ್ನು ತಮ್ಮ ವಾಹನದಲ್ಲಿಯೇ ಸಾಗಿಸಿದ್ದಾರೆ.
ಎಸ್ಪಿ ಭೇಟಿ
ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.