ಗೋಣಿಕೊಪ್ಪಲು, ಸೆ. ೧೯: ಗೋಣಿಕೊಪ್ಪ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ(ಕೆವಿಕೆ) ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾಗಿ ಡಾ.ಸಂಗಪ್ಪ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಕೆವಿಕೆ ಕೊಡಗಿನ ಮಾಜಿ ಪ್ರಭಾರ ಮುಖ್ಯಸ್ಥರು ಹಾಗೂ ಪ್ರಸ್ತುತ ಐಸಿಎಆರ್-ಐಐಎಚ್‌ಆರ್, ಸಿಹೆಚ್‌ಇಎಸ್ ಚಟ್ಟಳ್ಳಿ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ಮುರಳೀಧರ ಬಿ.ಎಂ. ಅವರಿಂದ ಇವರು ಅಧಿಕಾರ ವಹಿಸಿಕೊಂಡರು.
ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಕೆವಿಕೆಯ ವಿಷಯ ತಜ್ಞರಾದ ಪ್ರಭಾಕರ ಬಿ. (ತೋಟಗಾರಿಕೆ), ವೀರೇಂದ್ರ ಕುಮಾರ್ ಕೆ. ವಿ. (ಸಸ್ಯ ಸಂರಕ್ಷಣೆ), ಡಾ. ಸುರೇಶ್ ಎಸ್. ಸಿ. (ಪಶುಸಂಗೋಪನೆ), ಡಾ. ಮೋಹನ್ ಕುಮಾರ್ ಕೆ. ಟಿ. (ಮಣ್ಣು ವಿಜ್ಞಾನ), ಬೆನೆಸಿಯೋ ಫರ್ನಾಂಡಿಸ್ (ಕಂಪ್ಯೂಟರ್ ಪ್ರೋಗ್ರಾಮರ್) ಮತ್ತು ಸಿ. ಎಂ. ಮೋಹನ್ (ಎಎಒ) ಅವರ ಸಮ್ಮುಖದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಐಸಿಎಆರ್-ಐಐಎಚ್‌ಆರ್ ನಿರ್ದೇಶಕರಾದ ಡಾ. ತುಷಾರ್ ಕಾಂತಿ ಬೆಹೆರಾ, ಐಸಿಎಆರ್-ಅಟಾರಿ ವಲಯ ನಿರ್ದೇಶಕರಾದ ಡಾ. ಪ್ರಭಾಕರ್ ಎಂ. ಮತ್ತು ಅಟಾರಿ ಮಟ್ಟದ ಕೆವಿಕೆ ನೋಡಲ್ ಅಧಿಕಾರಿಯೂ ಆಗಿರುವ ಹಿರಿಯ ವಿಜ್ಞಾನಿ ಡಾ. ಗಂಗಾಧರ ಕೆ. ಅವರು ವರ್ಚುವಲ್ (ಅಂತರಜಾಲ) ಮೂಲಕ ಮಾರ್ಗದರ್ಶನ ನೀಡಿದರು.
ಹೊಸದಾಗಿ ನೇಮಕಗೊಂಡಿರುವ ಡಾ. ಸಂಗಪ್ಪ ಅವರು ಈ ಹಿಂದೆ ಹೈದರಾಬಾದ್‌ನ ಐಸಿಎಆರ್-ಐಐಎಂಆರ್ ಸಂಸ್ಥೆಯಲ್ಲಿ ಕೃಷಿ ವಿಸ್ತರಣೆ ವಿಭಾಗದ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಇವರು ಐಸಿಎಆರ್-ಡಿಕೆಎಂಎ ಸಂಸ್ಥೆಯ ಗೌರವಾನ್ವಿತ ಸದಸ್ಯರೂ ಆಗಿದ್ದಾರೆ. ಇವರು ಕೃಷಿ ವಿಸ್ತರಣೆ, ಸಿರಿಧಾನ್ಯ ತಂತ್ರಜ್ಞಾನ ಪ್ರಸಾರ, ರೈತರ ಸಂಘಟನೆ (ಕಲೆಕ್ಟಿವೈಸೇಶನ್), ಅಗ್ರಿಬಿಸಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಅಭಿವೃದ್ಧಿಯಲ್ಲಿ ನಿಪುಣರಾದ ಹಿರಿಯ ವಿಜ್ಞಾನಿಯಾಗಿದ್ದಾರೆ.
ಹೊಸ ಜವಾಬ್ದಾರಿಯನ್ನು ವಹಿಸಿಕೊಂಡು ಮಾತನಾಡಿದಡಾ>ಸಂಗಪ್ಪ ಅವರು, ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ತಮ್ಮ ದೂರದೃಷ್ಟಿಯನ್ನು ವ್ಯಕ್ತಪಡಿಸಿದರು. ಐಸಿಎಆರ್-ಕೆವಿಕೆ ಕೊಡಗು ಅತ್ಯಾಧುನಿಕ ಕೃಷಿ ಸಂಶೋಧನೆಗಳನ್ನು ನೇರವಾಗಿ ರೈತರ ಜಮೀನಿಗೆ ತಲುಪಿಸುವ ಒಂದು ಪ್ರಮುಖ ನಾವೀನ್ಯತಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ರೈತರ ಭೇಟಿಯನ್ನು ಹೆಚ್ಚಿಸುವುದು, ವೈಜ್ಞಾನಿಕ ಸಲಹಾ ಸೇವೆಗಳನ್ನು ವಿಸ್ತರಿಸುವುದು ಮತ್ತು ಈ ಕೇಂದ್ರವನ್ನು ಜಿಲ್ಲೆಯ ಸುಸ್ಥಿರ ಹಾಗೂ ಲಾಭದಾಯಕ ಕೃಷಿಯ ಅಗ್ರಗಣ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಶ್ರಮಿಸುವುದಾಗಿ ಪ್ರತಿಪಾದಿಸಿದರು.