ಮಡಿಕೇರಿ, ಸೆ. ೧೯: ‘ಅನುದಾನವಿಲ್ಲದೆ ಪೂರ್ಣಗೊಳ್ಳದ ಪಾರ್ಕ್; ಸಂಸದರಿಗೆ ಸುಳ್ಳು ಮಾಹಿತಿ’ ಎಂದು ‘ಶಕ್ತಿ’ಯಲ್ಲಿ ಪ್ರಕಟವಾದ ವರದಿಯ ಹಿನ್ನೆಲೆಯಲ್ಲಿ ಜಾಗೃತರಾದ ನಗರದ ಅಬ್ದುಲ್ ಕಲಾಂ ಬಡಾವಣೆಯ ಸೌಹಾರ್ದ ಸಮಿತಿಯ ಪದಾಧಿಕಾರಿಗಳು ನಗರಸಭಾ ಆಯುಕ್ತರನ್ನು ಭೇಟಿಯಾಗಿ ತಮ್ಮ ಬಡಾವಣೆಯಲ್ಲಿ ಉದ್ಯಾನವನ ನಿರ್ಮಾಣದ ಕುರಿತಂತೆ ಎದುರಾಗಿರುವ ಸಮಸ್ಯೆ ನಿವಾರಣೆಗಾಗಿ ಲಿಖಿತ ಮನವಿ ಸಲ್ಲಿಸಿದರು.
ಅಮೃತ್ ಯೋಜನೆಯನ್ವಯ ಕೇಂದ್ರ - ರಾಜ್ಯ ಸರಕಾರ ಹಾಗೂ ಸ್ಥಳೀಯ ಸಂಸ್ಥೆ ನಗರಸಭೆಯ ಅನುದಾನದಡಿಯಲ್ಲಿ ಅಬ್ದುಲ್ ಕಲಾಂ ಬಡಾವಣೆಯಲ್ಲಿ ಉದ್ಯಾನವನ ನಿರ್ಮಾಣ ಕಾರ್ಯವನ್ನು ಶಾಸಕರ ಉಪಸ್ಥಿತಿಯಲ್ಲಿ ಪ್ರಾರಂಭಿಸಲಾಗಿತ್ತು. ಇದಕ್ಕೆ ಪೂರ್ವಭಾವಿಯಾಗಿ ಕಾಮಗಾರಿಯ ಹಕ್ಕುದಾರಿಕೆಯನ್ನು ಪಡೆದ ಗುತ್ತಿಗೆದಾರರು ಪ್ರಾರಂಭಿಕ ಕೆಲಸ - ಕಾರ್ಯಗಳನ್ನು ಕೈಗೊಂಡಿದ್ದರು. ನಂತರ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಕುರಿತು ಗುತ್ತಿಗೆದಾರರನ್ನು ವಿಚಾರಿಸಿದಾಗ, ಕಾಮಗಾರಿಯ ಬಿಲ್ ದೊರೆಯದ ಹಿನ್ನೆಲೆಯಲ್ಲಿ ಕೆಲಸ - ಕಾರ್ಯಗಳನ್ನು ನಿಲ್ಲಿಸಲಾಗಿದೆ ಎಂದು ಉತ್ತರ ಲಭ್ಯವಾಗಿತ್ತು.
ಈ ಮಧ್ಯೆ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾದ ವಿಸ್ತೃತ ವರದಿಯಲ್ಲಿ ಅಧಿಕಾರಿಗಳಿಂದ ಲೋಕಸಭಾ ಸದಸ್ಯರಿಗೇ ಸುಳ್ಳಿನ ಮಾಹಿತಿಯನ್ನು ನೀಡಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಬ್ದುಲ್ ಕಲಾಂ ಬಡಾವಣೆ ಸೌಹಾರ್ದ ಸಮಿತಿಯ ಪದಾಧಿಕಾರಿಗಳು ನಗರಸಭಾ ಆಯುಕ್ತರನ್ನು ಭೇಟಿ ಮಾಡಿ ವಿಚಾರ ವಿನಿಮಯ ನಡೆಸುವುದರ ಮೂಲಕ ಶೀಘ್ರ ಉದ್ಯಾನವನ್ನು ನಿರ್ಮಿಸುವಂತಾಗಬೇಕೆAದು ಮನವಿ ಮಾಡಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ನಗರಸಭಾ ಆಯುಕ್ತ ರಮೇಶ್ ಅವರು, ಉದ್ಯಾನವನ ನಿರ್ಮಾಣ ಕಾರ್ಯಕ್ಕೆ ಯಾವುದೇ ತಾಂತ್ರಿಕ ಅಡ್ಡಿ - ಆತಂಕಗಳು ಎದುರಾಗಲಿಲ್ಲ. ಕೂಡಲೇ ನಿರ್ಮಾಣ ಕಾರ್ಯ ಪ್ರಾರಂಭ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರಸಭಾ ಆಯುಕ್ತರನ್ನು ಸಮಿತಿಯ ಅಧ್ಯಕ್ಷ ಎಂ.ಎ. ಸಾಧು ಸಾದಿಕ್ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರುಗಳಾದ ಬಿ.ಆರ್. ಜೀವನ್, ಎಂ.ಬಿ. ಮಹಮ್ಮದ್ ಕೌಸರ್ ಹಾಗೂ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಅವರುಗಳು ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿದರು.