ಮಡಿಕೇರಿ,ಸೆ.೧೯: ಕಸ್ತೂರಿ ರಂಗನ್ ವರದಿ ವಿರೋಧಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ಡೋಂಗಿ ಪರಿಸರವಾದಿಗಳಿಗೆ ವಿದೇಶಿ ಹಣ ಬರುತ್ತಿದೆ ಎಂಬ ಹೇಳಿಕೆ ನೀಡಿದ್ದು ಈ ಬಗ್ಗೆ ತನಿಖೆಯಾಗಲಿ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್ವಿರಾನ್‌ಮೆಂಟ್ ಅಂಡ್ ಹೆಲ್ತ್ ಫೌಂಡೇಶನ್ ಇಂಡಿಯಾದ ಪ್ರಮುಖರಾದ ಕರ್ನಲ್ ಸಿ.ಪಿ.ಮುತ್ತಣ್ಣ; ಕೊಡಗಿನ ಪರಿಸ ರಕ್ಷಣೆಗೆ ಎಲ್ಲರ ಬೆಂಬಲ ಅವಶ್ಯವಾಗಿದೆ. ಅದರಲ್ಲೂ ರಾಜಕಾರಣಿಗಳ ಬೆಂಬಲ ಅತ್ಯಗತ್ಯ. ಆದರೆ; ಈಚೆಗೆ ನಡೆದ ಪ್ರತಿಭಟನೆಯಲ್ಲಿ ಅಪ್ಪಚ್ಚು ರಂಜನ್ ಅವರು ಡೋಂಗಿ ಪರಿಸರವಾದಿಗಳೆಂದು ಉಲ್ಲೇಖಿಸಿರುವದಲ್ಲದೆ, ಅವರುಗಳಿಗೆ ವಿದೇಶದಿಂದ ಹಣ ಬರುತ್ತಿದ್ದು ದುರುಪಯೋಗವಾಗುತ್ತಿದೆ ಎಂದು ಹೇಳಿದ್ದಾರೆ. ಡೋಂಗಿ ಪರಿಸರವಾದಿಗಳು ಯಾರು ಎಂಬದು ಅಪ್ಪಚ್ಚು ರಂಜನ್ ಅವರಿಗೆ ತಿಳಿದಿದ್ದರೆ ಸ್ಪಷ್ಟವಾಗಿ ಅವರ ಹೆಸರನ್ನು ಬಹಿರಂಗಪಡಿಸಲಿ, ಎಲ್ಲರನ್ನೂ ಸೇರಿಸಿ ಹೇಳುವದು ಸರಿಯಲ್ಲ. ಇದರಿಂದಾಗಿ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ, ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಅದೂ ಅಲ್ಲದೆ ವಿದೇಶಿ ಹಣ ಬರುತ್ತಿದ್ದು ದುರುಪಯೋಗವಾಗುತ್ತಿದೆ ಎಂದೂ ಹೇಳಿದ್ದಾರೆ, ಒಂದು ವೇಳೆ ವಿದೇಶಿ ಹಣ ಬರುತ್ತಿದ್ದರೆ ಅದು ಅಂತರರಾಷ್ಟಿçÃಯ ಮಟ್ಟದ ಅಪರಾಧವಾಗಲಿದ್ದು, ಈ ಬಗ್ಗೆ ಮೊಕದ್ದಮೆ ದಾಖಲಿಸಿ ತನಿಖೆಯಾಗುವಂತೆ ಮಾಡಲಿ ಎಂದು ಒತ್ತಾಯಿಸಿದರು. ಪರಿಸರ ಉಳಿದರೆ ಕಾವೇರಿ ಉಳಿಯಲಿದ್ದು, ಇಲ್ಲಿನ ಮೂಲನಿವಾಸಿಗಳು ಉಳಿಯಲಿದ್ದಾರೆ. ನಾವು ಯಾವದೇ ಪಕ್ಷದ ಪರ-ವಿರೋಧವಾಗಿಲ್ಲ, ಎಲ್ಲರ ಬೆಂಬಲ ಬಯಸುವದಾಗಿ ಮುತ್ತಣ್ಣ ಹೇಳಿದರು.

ಸಮಿತಿಯ ಸದಸ್ಯ ಗೋಪಿನಾಥ್ ತಿಮ್ಮಯ್ಯ ಮಾತನಾಡಿ; ಅಪ್ಪಚ್ಚು ರಂಜನ್ ಅವರ ಹೇಳಿಕೆ ಖಂಡನೀಯ; ಡೋಂಗಿ ಪರಿಸರವಾದಿಗಳು ಯಾರೆಂದು ಸ್ಪಷ್ಟವಾಗಿ ಹೇಳಬೇಕು. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವದು ಸರಿಯಲ್ಲ; ಅವರು ಜನಪ್ರತಿನಿಧಿಯಾಗಿ ಕೆಲಸ ಮಾಡಿದವರರಾಗಿದ್ದು ಅವರಿಗೆ ಯಾರೆಂದು ತಿಳಿದಿರುತ್ತದೆ ಎಂದು ಹೇಳಿದರು. ನಾವುಗಳು ಪ್ರಕೃತಿ ಉಳಿಸಲು ಹೋರಾಟ ಮಾಡುತಿದ್ದು, ಕಸ್ತೂರಿ ರಂಗನ್ ವರದಿಯ ಪರ ಅಥವಾ ವಿರುದ್ಧವೂ ಅಲ್ಲ; ಆದರೆ ವರದಿ ಜಾರಿಯಾಗಲೇಬೇಕು. ಇಲ್ಲವಾದಲ್ಲಿ ಪ್ರಕೃತಿ ಇರುವದಿಲ್ಲ, ಕೇವಲ ಕಟ್ಟಡಗಳನ್ನು ಮಾತ್ರ ನಿರ್ಮಿಸಿದರೆ ಸಾಲದು; ಪ್ರಕೃತಿ ಉಳಿಯಬೇಕು ಎಂದು ಹೇಳಿದರು.

ಮತ್ತೋರ್ವ ಸದಸ್ಯ ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ; ಕಸ್ತೂರಿ ರಂಗನ್ ವರದಿ ಜಾರಿಗೆ ಬರುವ ಮುನ್ನವೇ ಪರಿಸರದ ಬಗ್ಗೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಡೋಂಗಿ ಪರಿಸರವಾದಿ ಎಂಬ ರಾಜಕೀಯ ವ್ಯಕ್ತಿಯ ಹೇಳಿಕೆ ಸರಿಯಲ್ಲ, ವರದಿಯಲ್ಲಿ ಯಾವದು ಅವೈಜ್ಞಾನಿಕ, ರೈತ ವಿರೋಧಿ, ಪರಿಸರ ವಿರೋಧಿ ಇದೆ ಎಂಬದನ್ನು ಇದುವರೆಗೂ ಯಾರೂ ಕೂಡ ಸ್ಪಷ್ಟಪಡಿಸಿಲ್ಲ. ಮರ, ಕಾಡು ಇಲ್ಲವಾದರೆ ಕುಡಿಯಲು ನೀರು ಕೂಡ ಇರುವದಿಲ್ಲ. ತಾನು ವಾಸಿಸುವ ಸ್ಥಳ ಸೂಕ್ಷö್ಮ ಪರಿಸರ ತಾಣದ ಒಳಗಡೆ ಇದ್ದು ತನಗೆ ಯಾವದೇ ಸಮಸ್ಯೆ ಉಂಟಾಗುತ್ತಿಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ಸದಸ್ಯ ಫ್ರಾಂಕ್ಲಿನ್ ಇದ್ದರು.