ಮಡಿಕೇರಿ, ಸೆ. ೧೯: ಬಹುಸಂಖ್ಯಾತರ ರಾಜ್ಯಾಧಿಕಾರದ ವ್ಯಾಪ್ತಿಯಲ್ಲಿ ಕಾಂಪ್ಯಾಕ್ಟ್ ಭೂಪ್ರದೇಶದಲ್ಲಿ ವಾಸಿಸುವ ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವು ಸಹಜ ಹಕ್ಕಾಗಿದೆ. ವಿಶ್ವಸಂಸ್ಥೆಯ ಆದಿಮಸಂಜಾತರ ಹಕ್ಕುಗಳ ಘೋಷಣೆ ಹಾಗೂ ಭಾರತದ ಸಂವಿಧಾನದ ಆಶಯಗಳ ಆಧಾರದಲ್ಲಿ ಕೊಡವಲ್ಯಾಂಡ್ ಸ್ವಾಯತ್ತತೆಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.

ಚೆಟ್ಟಳ್ಳಿಯಲ್ಲಿ ನಡೆದ ೩ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವಲ್ಯಾಂಡ್ ಸ್ವಾಯತ್ತತೆ ಕೊಡವರ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸಿದರು. ನಮ್ಮ ಆದಿಮಸಂಜಾತರ ಶ್ರೇಷ್ಠ ಗುಣಲಕ್ಷಣಗಳನ್ನು ಸಾಬೀತುಪಡಿಸುವಾಗ, ಯಾವುದೇ ದೃಷ್ಟಿಯಲ್ಲಿ ನಮ್ಮ ಸಂಪೂರ್ಣ ಗುರುತು ಬೇರೆಯವರೊಂದಿಗೆ ವಿಲೀನಗೊಂಡು ನಾಶವಾಗದಂತೆ ನಾವು ನೋಡಿಕೊಳ್ಳಬೇಕು.

ವಿಶ್ವದ ಅತಿದೊಡ್ಡ ಜನಾಂಗೀಯ ವೈವಿಧ್ಯತೆಯ ದೇಶದಲ್ಲಿ, ನಮ್ಮ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ಮಾತೃಭೂಮಿಯಲ್ಲಿ ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಲು ಸಂವಿಧಾನದ ಅಡಿಯಲ್ಲಿ ಸುರಕ್ಷಿತ ಸ್ಥಳ ಮತ್ತು ಸ್ಥಾನವನ್ನು ನಾವು ಕೊಡವರು ಬಯಸುತ್ತೇವೆ. ಇದು ನಮ್ಮ ಸಹಜ ಹಕ್ಕು, ಜನ್ಮಸಿದ್ದ ಹಕ್ಕು, ಮೂಲಭೂತ ಹಕ್ಕು, ಸಾಂವಿಧಾನಿಕ ಹಕ್ಕು ಮತ್ತು ಮಾನವ ಹಕ್ಕು. ಯಾವುದೇ ಶಕ್ತಿಯು ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ನಾಚಪ್ಪ ಹೇಳಿದರು. ಡಾರ್ಜಿಲಿಂಗ್‌ನ ಗೋರ್ಖಾಲ್ಯಾಂಡ್ ಹಾಗೂ ವಿಶಾಖಪಟ್ಟಣಂ - ಗೋದಾವರಿ ಹಿಲ್ ಟ್ರ‍್ಯಾಕ್ಟ್ ಏಜೆನ್ಸಿಗಳ ಮಾದರಿಯಲ್ಲಿ ಸಂವಿಧಾನದ ೫ನೇ ಅನುಸೂಚಿಯಡಿ ಕೊಡವಲ್ಯಾಂಡ್‌ಗೆ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಕೊಡವರ ಭೂಮಿ, ನೀರು, ಸಂಸ್ಕೃತಿ, ಪರಂಪರೆ, ಪರಿಸರ ಹಾಗೂ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಕೊಡವರನ್ನು ಪ್ರತ್ಯೇಕ ನಿಸರ್ಗ ಆರಾಧಕ ಜನಾಂಗೀಯ ಸಮುದಾಯವಾಗಿ ಸಾಂವಿಧಾನಿಕವಾಗಿ ಗುರುತಿಸುವ ಅಗತ್ಯವಿದೆ. ಕೊಡವರ ವಿಶಿಷ್ಟ ವಂಶಾವಳಿ, ಗುರುತು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಸಂರಕ್ಷಿಸಬೇಕು ಎಂದು ನಾಚಪ್ಪ ಹೇಳಿದರು.

೨೦೨೭ರ ಜನಗಣತಿಯಲ್ಲಿ ಪ್ರತ್ಯೇಕ ಎಣಿಕೆಗೆ ಒತ್ತಾಯ

ಮುಂಬರುವ ರಾಷ್ಟಿçÃಯ ಜನಗಣತಿ ೨೦೨೭ರಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಿ, ಪ್ರತ್ಯೇಕವಾಗಿ ಎಣಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ೧೮೭೧-೭೨ ರಿಂದ ೧೯೪೧ ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಸಮುದಾಯವಾಗಿ ಗುರುತಿಸಲಾಗಿತ್ತು. ನಂತರದ ಅವಧಿಯಲ್ಲಿ ಈ ಪ್ರತ್ಯೇಕ ಗುರುತು ಕಳೆದುಹೋಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೊಡವ ಭಾಷೆಯನ್ನು ಸಂವಿಧಾನದ ೮ನೇ ಅನುಸೂಚಿಗೆ ಸೇರಿಸುವುದು, ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ (ಐಎಲ್‌ಪಿ) ವ್ಯವಸ್ಥೆ ಜಾರಿಗೊಳಿಸುವುದು, ಕೊಡವರ ಸಾಂಪ್ರದಾಯಿಕ ಭೂಮಿಯ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಹಾಗೂ ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸುವ ಕುರಿತು ಸಿಎನ್‌ಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಾದ ಮಂದ್, ದೇವಬನ, ಗನ್-ತೋಕ್ ಪರಂಪರೆ ಸೇರಿದಂತೆ ಕೊಡವ ಪರಂಪರೆಯ ತಾಣಗಳು ಮತ್ತು ಆಚರಣೆಗಳನ್ನು ಸಂರಕ್ಷಿಸಬೇಕು. ಯುನೆಸ್ಕೋ ಮಾನ್ಯತೆ ಸೇರಿದಂತೆ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಾಚಪ್ಪ ಹೇಳಿದರು.

ಕೊಡಗಿನ ಭೂ ಪರಿವರ್ತನೆಗೆ ವಿರೋಧ

ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ನಡೆಯುತ್ತಿರುವ ಭೂ ಪರಿವರ್ತನೆ ಹಾಗೂ ದೊಡ್ಡ ಪ್ರಮಾಣದ ರೆಸಾರ್ಟ್, ಟೌನ್‌ಶಿಪ್ ಮತ್ತು ಲೇಔಟ್ ನಿರ್ಮಾಣಗಳಿಂದ ಪರಿಸರ, ಕೃಷಿಭೂಮಿ, ಕಾಫಿ ತೋಟಗಳು ಹಾಗೂ ನೈಸರ್ಗಿಕ ಜಲಮೂಲಗಳ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪಶ್ಚಿಮಘಟ್ಟ ಹಾಗೂ ಕಾವೇರಿ ಜಲಾನಯನ ಪ್ರದೇಶದ ಸೂಕ್ಷö್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಕೊಡಗಿನಲ್ಲಿ ಭೂ ಬಳಕೆಯ ಬದಲಾವಣೆ ಮತ್ತು ವಾಣಿಜ್ಯ ನಿರ್ಮಾಣಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ ಎಂದು ನಾಚಪ್ಪ ಹೇಳಿದರು.

ಪ್ರಮಾಣ ವಚನ ಸ್ವೀಕಾರ

ಮಾನವ ಸರಪಳಿಯಲ್ಲಿ ಪಾಲ್ಗೊಂಡವರು ಗುರು-ಕಾರೋಣ, ಸೂರ್ಯ-ಚಂದ್ರ, ಭೂತಾಯಿ, ವನದೇವಿ, ಜಲದೇವಿ ಕಾವೇರಿ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಚೋಳಪಂಡ ಜ್ಯೋತಿ ನಾಣಯ್ಯ, ಚೋಳಪಂಡ ತಾಜಾ ಕಾಳಯ್ಯ, ಅಡಿಕೆರೆ ಶಾಂತಿ ಜಯ, ಪುತ್ತರಿರ ಸೀತಮ್ಮ, ಪುತ್ತರಿರ ಲತಾ ಜೋಯಪ್ಪ, ಪಟ್ಟಮಡ ಲಲಿತಾ, ಮುಲ್ಲಂಡ ಮಾಯಮ್ಮ, ಕೊಂಗೇಟಿರ ವಾಣಿ ಕಾಳಪ್ಪ, ಕೊಂಗೇಟಿರ ವೀಣಾ ಅಪ್ಪಣ್ಣ, ಕೊಂಗೇಟಿರ ಮೀರಾ ಚಂಗಪ್ಪ, ನಂದಿನೆರವAಡ ಪಾರ್ವತಿ, ಪೊರಿಮಂಡ ದಿನಮಣಿ ಪೂವಯ್ಯ, ಚೋಳಪಂಡ ನಾಣಯ್ಯ, ಚೋಳಪಂಡ ಸುರೇಶ್ ಕಾಳಯ್ಯ, ಚೋಳಪಂಡ ಪೂವಯ್ಯ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ, ಪುತ್ತರಿರ ವಾಸು ಕೇಶವ, ಪುತ್ತರಿರ ಪಪ್ಪು ತಿಮ್ಮಯ್ಯ, ನಿವೃತ್ತ ಏರ್ ಫೋರ್ಸ್ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ, ಪುತ್ತರಿರ ರಮೇಶ್ ಮುತ್ತಣ್ಣ, ಚೋಳಪಂಡ ವಿಜಯ, ಕೊಂಗೇಟಿರ ಹರೀಶ್ ಅಪ್ಪಣ್ಣ, ಮುಳ್ಳಂಡ ಸನ್ನಿ ಅಯ್ಯಪ್ಪ, ಚೋಳಪಂಡ ಗಣಪತಿ, ಅಡಿಕೆರೆ ಜಯ ಮುತ್ತಪ್ಪ, ಬದಲೆರ ಕೌಶಿಕ್, ಬಲ್ಲಾರಂಡ ದೇವಿ, ಮುಳ್ಳಂಡ ಪುಷ್ಯ ರಂಜನ್, ಮುಳ್ಳಂಡ ರತ್ತು ಚಂಗಪ್ಪ, ಪೊರಿಮಂಡ ಲೋಕ ದೇವಯ್ಯ, ವಕೀಲ ಕಾಡೆಮಡ ವಿನ್ಸಿ ಅಪ್ಪಯ್ಯ, ಮುಳ್ಳಂಡ ರಾಮು, ಸೊಮೇಯಂಡ ದಿಲೀಪ್ ಅಪ್ಪಚ್ಚು, ಕೊಕ್ಕೇರ ದೊರೆ, ಬಟ್ಟೀರ ಕಾವೇರಪ್ಪ, ಪಾಲೇಕಂಡ ಪೂಣಚ್ಚ, ಬಿದ್ದಂಡ ಮಾದಯ್ಯ, ಬಿದ್ದಂಡ ಅಚಯ್ಯ, ಐಚೆಟ್ಟಿರ ಉಮೇಶ್ ಮಾಚಯ್ಯ, ಮುಳ್ಳಂಡ ಲೋಹಿತ್ ಅಪ್ಪಣ್ಣ, ಶ್ರೀಮಂಗಲ ಲಕ್ಷ್ಮಿ ನಿಧಿ ಅಧ್ಯಕ್ಷ ಬಟ್ಟೀರ ರಕ್ಷು ಕಾಳಪ್ಪ, ಕೊಂಗೇಟಿರ ಬೋಪಯ್ಯ, ಕೊಂಗೇಟಿರ ಕುಶ, ಪುತ್ತರಿರ ರಾಬಿನ್ ಚಂಗಪ್ಪ, ಬಟ್ಟೀರ ಬಿದ್ದಪ್ಪ, ಪುತ್ತರಿರ ಬೆಳ್ಳಿಯಪ್ಪ, ಚೋಳಪಂಡ ಪೂವಯ್ಯ, ಐತಿಚಂಡ ಪೂವಣ್ಣ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಸ್ವಾಗತಿಸಿದರು. ನೂರೊಕ್ಕನಾಡ್ ತಕ್ಕ ಪೊರಿಮಂಡ ದಿನಮಣಿ ಪೂವಯ್ಯ ವಂದಿಸಿದರು. ಜಾಗೃತಿ ಅಭಿಯಾನದ ಮುಂದಿನ ಕಾರ್ಯಕ್ರಮ ಅಕ್ಟೋಬರ್ ೧ ರಂದು ಸಿದ್ದಾಪುರದಲ್ಲಿ ಹಾಗೂ ಅಕ್ಟೋಬರ್ ೫ ರಂದು ಚೇರಂಬಾಣೆಯಲ್ಲಿ ನಡೆಯಲಿದೆ ಎಂದು ಎನ್.ಯು. ನಾಚಪ್ಪ ತಿಳಿಸಿದರು.