ಸಿದ್ದಾಪುರ, ಸೆ.೧೮: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಮೈತಾಡಿ ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿರುವ ಘಟನೆ ನಡೆದಿದೆ.

ಮೈತಾಡಿ ಗ್ರಾಮದ ನಿವಾಸಿ ಭೀಮಯ್ಯ ಅವರಿಗೆ ಸೇರಿದ ಸುಮಾರು ಆರು ವರ್ಷ ಪ್ರಾಯದ ಹಸುವನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಸಂಜೆ ಸುಮಾರು ೫ ಗಂಟೆಗೆ ಕಾಫಿ ತೋಟದೊಳಗಿನಿಂದ ಬಂದ ಹುಲಿ ಹಸುವಿನ ಮೇಲೆ ದಾಳಿ ನಡೆಸಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಸು ಹುಲಿ ದಾಳಿಗೆ ಬಲಿಯಾಗಿರುವುದರಿಂದ ಮಾಲೀಕರಿಗೆ ನಷ್ಟ ಉಂಟಾಗಿದೆ. ಘಟನೆಯಿಂದ ಮೈತಾಡಿ ಹಾಗೂ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಕಾರ್ಮಿಕರು ಭಯಪಡುವಂತಾಗಿದೆ.

ಘಟನೆ ಕುರಿತು ಹಸುವಿನ ಮಾಲೀಕರು ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚೌಹಾಣ್ ಹಾಗೂ ಎಸಿಎಫ್ ತಹಸೀನ್ ಬಾನು ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಂ, ಉಪ ವಲಯ ಅರಣ್ಯಾಧಿಕಾರಿ ರಾಘವ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಲಿಯ ಚಲನವಲನ ಪತ್ತೆಹಚ್ಚುವ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾಫಿ ತೋಟದಲ್ಲಿ ಆರು ಕ್ಯಾಮರಾ ಟ್ರಾö್ಯಪ್‌ಗಳನ್ನು ಅಳವಡಿಸಿದ್ದಾರೆ. ಅಲ್ಲದೆ ಹುಲಿಯ ಚಲನವಲನ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆರ್‌ಆರ್‌ಟಿ, ಆನೆ ಕಾರ್ಯಪಡೆ ಮತ್ತು ಇಟಿಎಫ್ ತಂಡದ ಸಿಬ್ಬಂದಿ ಕೂಂಬಿAಗ್ ಕಾರ್ಯಾಚರಣೆ ನಡೆಸಿದರು.

ಈ ಕುರಿತು ಮಾತನಾಡಿದ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಂ, ಹುಲಿಯ ಚಲನವಲನವನ್ನು ಕ್ಯಾಮರಾಗಳ ಮೂಲಕ ಗಮನಿಸಲಾಗುತ್ತಿದ್ದು, ಹುಲಿ ಇರುವಿಕೆ ಖಚಿತವಾದ ಬಳಿಕ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹುಲಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲೂ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಇತ್ತೀಚೆಗಷ್ಟೇ ವೀರಾಜಪೇಟೆ ತಾಲೂಕಿನ ಕೊಳತೋಡು ಮುಖ್ಯ ರಸ್ತೆಯಲ್ಲಿ ಬೆಳಗ್ಗಿನ ಜಾವ ಹುಲಿ ಸಂಚರಿಸುತ್ತಿರುವುದನ್ನು ವಾಹನದಲ್ಲಿ ತೆರಳುತ್ತಿದ್ದ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಇದೀಗ ಮೈತಾಡಿ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿರುವುದು ಈ ಭಾಗದಲ್ಲಿ ಹುಲಿಯ ಸಂಚಾರದ ಬಗ್ಗೆ ಗ್ರಾಮಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ವಸತಿ ಪ್ರದೇಶ ಹಾಗೂ ಕಾಫಿ ತೋಟಗಳಲ್ಲಿ ಸಂಚರಿಸುತ್ತಿರುವ ಹುಲಿಯನ್ನು ಸೆರೆಹಿಡಿದು ಸ್ಥಳಾಂತರಿಸುವAತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈಗಾಗಲೇ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರಿಗೆ ಹುಲಿ ದಾಳಿಯ ಘಟನೆಯೂ ಮತ್ತಷ್ಟು ಭೀತಿಗೆ ಕಾರಣವಾಗಿದೆ. - ವಾಸು