ವೀರಾಜಪೇಟೆ, ಸೆ. ೧೫: ಮಕ್ಕಳಿಗೆ ಬದುಕಿನ ಉತ್ತಮ ಮೌಲ್ಯಗಳನ್ನು ಧಾರೆ ಎರೆದು ಅವರನ್ನು ದೇಶದ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರ ನಿತ್ಯದ ಶ್ರಮ ಅತ್ಯಂತ ಪೂಜನೀಯವಾಗಿದೆ. ಶಿಕ್ಷಕರು ಪ್ರತಿದಿನ ತಮ್ಮ ಸಮಯವನ್ನು ಮಕ್ಕಳೊಂದಿಗೆ ಕಳೆದು ಅವರ ಭವಿಷ್ಯ ರೂಪಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಹೇಳಿದರು.
ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ವೀರಾಜಪೇಟೆ ತಾಲೂಕು ಶಿಕ್ಷಕರ ಕಲ್ಯಾಣ ಸಮಿತಿ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸಂತ ಅನ್ನಮ್ಮ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಸಾಲಿನ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳೊAದಿಗೆ ತೇರ್ಗಡೆಯಾಗಿರುವುದು ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇದು ಶಿಕ್ಷಕರು ನೀಡಿದ ಗುಣಮಟ್ಟದ ಶಿಕ್ಷಣದ ಪ್ರತಿಫಲವಾಗಿದ್ದು, ಇದರ ಸಂಪೂರ್ಣ ಶ್ರೇಯಸ್ಸು ಮೌಲ್ಯಯುತ ಶಿಕ್ಷಣ ನೀಡಿದ ಅಧ್ಯಾಪಕರ ವೃಂದಕ್ಕೆ ಸಲ್ಲುತ್ತದೆ. ವಿದ್ಯಾರ್ಥಿಗಳ ಉತ್ತಮ ಸಾಧನೆಗಾಗಿ ಶ್ರಮಿಸಿದ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ಪೊನ್ನಣ್ಣ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಬದುಕಿನ ಯಶಸ್ಸಿಗೆ ಹಾದಿ ತೋರಿಸಿದ ಶಿಕ್ಷಕರ ಕೊಡುಗೆಯನ್ನು ನೆನಪಿಸಿಕೊಂಡ ಅವರು, ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರ ಪಾತ್ರ ಅವಿಸ್ಮರಣೀಯವಾಗಿದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಗುರುಗಳ ಶ್ರಮವಿರುತ್ತದೆ. ಇಂದಿನ ದಿನಗಳಲ್ಲಿ ಶಿಕ್ಷಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳು, ಆಡಳಿತಾತ್ಮಕ ತೊಡಕುಗಳು ಹಾಗೂ ಸೇವಾ ಸೌಲಭ್ಯಗಳ ಕುರಿತು ಪ್ರಸ್ತಾಪಿಸಿದ ಅವರು, ಶಿಕ್ಷಕರ ಬೆಂಬಲಕ್ಕೆ ಸದಾ ನಿಲ್ಲುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡ ವಾಗ್ಮಿ ಡಾ. ಎಂ. ನರಸಿಂಹಮೂರ್ತಿ ಮೊದಲು ಶಿಕ್ಷಕರಿಗೆ ಸಾಮಾಜಿಕ ಗೌರವದೊಂದಿಗೆ ಅವರನ್ನು ಕಂಡರೆ ಭಯ-ಭಕ್ತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಸಾಂಸ್ಕೃತಿಕ ಮೌಲ್ಯಗಳು ಕ್ಷೀಣಿಸುತ್ತಿರುವುದು ಕಳವಳಕಾರಿ ಎಂದರು.
ಸಮಾಜವನ್ನು ತಿದ್ದುವ ಜವಾಬ್ದಾರಿಯನ್ನು ಶಿಕ್ಷಕರು ಮರಳಿ ಪಡೆದುಕೊಳ್ಳಬೇಕು. ಕೇವಲ ಅಂಕಗಳಿಕೆಗೆ ಆದ್ಯತೆ ನೀಡದೆ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಕರ ಮೇಲೆ ಬೋಧನೆಯ ಹೊರತಾಗಿ ವಿವಿಧ ಕರ್ತವ್ಯಗಳ ಹೊರೆ ಹೆಚ್ಚಾಗಿ ಹೊರಿಸಲಾಗುತ್ತಿದ್ದು, ಇದರಿಂದ ಅವರು ಮೂಲ ಕಾಯಕದಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಹಾಗೂ ಸಮಾಜ ಶಿಕ್ಷಕರಿಗೆ ಸೂಕ್ತ ಗೌರವ ನೀಡಿ ಕರ್ತವ್ಯ ನಿರ್ವಹಿಸಲು ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ, ಶಿಸ್ತು ಹಾಗೂ ಕ್ರೀಡಾ ಮನೋಭಾವ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಗುರು-ಶಿಷ್ಯರ ಸಂಬAಧ ಪವಿತ್ರವಾದದ್ದು. ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಶಿಕ್ಷಕರ ಶ್ರಮ ಹಾಗೂ ಹಾರೈಕೆ ಇದ್ದೇ ಇರುತ್ತದೆ ಎಂದು ಹೇಳಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭ ನಿವೃತ್ತ ಶಿಕ್ಷಕರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಸಂತ ಅನ್ನಮ್ಮ ಶಾಲೆಯ ವ್ಯವಸ್ಥಾಪಕ ಫಾದರ್ ಜೇಮ್ಸ್ ಡೋಮಿನಿಕ್, ಶಿಕ್ಷಕರ ಕಲ್ಯಾಣ ಸಮಿತಿ ಅಧ್ಯಕ್ಷ ಮಾದಂಡ ತಿಮ್ಮಯ್ಯ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಪಿ.ವಿ. ಜಾನ್ಸನ್ ಹಾಗೂ ಕಾಳಿಮಾಡ ಪ್ರಶಾಂತ್, ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಅನುದಾನ ರಹಿತ ಸಂಘದ ಅಧ್ಯಕ್ಷ ಕೋಟ್ರಂಗಡ ತಿಮ್ಮಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್. ರಮೇಶ್ ಸೇರಿದಂತೆ ತಾಲೂಕಿನ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.