ಮಡಿಕೇರಿ, ಸೆ. ೧೫: ಸಾಮಾನ್ಯವಾಗಿ ಪ್ರತಿ ವರ್ಷ ಕೊಡಗಿನಲ್ಲಿ ಗಣೇಶ ಚೌತಿ ಸಂದರ್ಭ ಮುಂಗಾರಿನ ಛಾಯೆಯು ಕರಿಮೋಡಗಳನ್ನು ಸೃಷ್ಟಿಸಿ ಅಲ್ಪಸ್ವಲ್ಪ ಮಳೆ ಬೀಳುವುದರೊಂದಿಗೆ ಮೋಡದ ವಾತಾವರಣವಿರುತ್ತಿತ್ತು. ದಟ್ಟ ಮೋಡಗಳ ಚೌತಿಯ ಸಂಜೆ ಸೂರ್ಯಾಸ್ತಮಾನದ ಬಳಿಕ ಚಂದ್ರನನ್ನು ಬಹುತೇಕರಿಗೆ ಆಕಸ್ಮಿಕವಾಗಿ ನೋಡಲು ಆಗುತ್ತಿರಲಿಲ್ಲ. ಆದರೆ ಈ ಬಾರಿಯ ಮೋಡ ರಹಿತ ವಾತಾವರಣದಲ್ಲಿ ಚಂದ್ರ ಸಹಿತ ನಕ್ಷತ್ರಾದಿಗಳು ಸುಲಭವಾಗಿ ಗೋಚರಿಸುತ್ತಿವೆ.

ನಿನ್ನೆಯ ಚೌತಿ ದಿನದಂದು ಚಂದ್ರನ ಕೆಳಭಾಗದಲ್ಲಿದ್ದ ಶುಕ್ರ ಗ್ರಹವು ಚಂದ್ರನ ಸೌಂದರ್ಯವನ್ನು ಇಮ್ಮಡಿಗೊಳಿಸಿತು. ವಾರ್ಷಿಕ ಒಂದೆರಡು ಬಾರಿಯಾದರೂ ಸಂಭವಿಸುವ ಈ ಶುಕ್ರ-ಚಂದ್ರ ಸಮ್ಮಿಲನವನ್ನು ಬಹುತೇಕ ಮಂದಿ ವೀಕ್ಷಿಸಿ ಕಣ್ತುಂಬಿಕೊAಡರೆ ಮತ್ತೆ ಕೆಲ ಮಂದಿ ಚಂದ್ರನನ್ನು ನೋಡಿದ ಬಳಿಕ “ಅಯ್ಯೋ, ಇಂದು ಚೌತಿಯಲ್ವ”..! ಎಂದು ಹೇಳುತ್ತಾ ಆತಂಕಕ್ಕೆ ಒಳಗಾದರು.

ಪುರಾಣಗಳ ಪ್ರಕಾರ, ಗಣಪನ ಸ್ವರೂಪವನ್ನು ಹೀಯಾಳಿಸಿದ್ದ ಚಂದ್ರನಿಗೆ ಗಣಪನು ಶಾಪ ನೀಡುತ್ತಾನೆ. ಚೌತಿ ದಿನದಂದು ಜನರು ಚಂದ್ರನನ್ನು ವೀಕ್ಷಿಸಿದರೆ ಅವರುಗಳ ಮೇಲೆ ಸುಳ್ಳು ಅಪವಾದ ಬರುವುದಾಗಿ ಅನೇಕ ಮಂದಿ ನಂಬಿದ್ದಾರೆ.

-ಪಿ.ಜಿ.ಆರ್, ಚಿತ್ರ-ದುಗ್ಗಳ