ಮಡಿಕೇರಿ, ಸೆ.೧೫; ವಿಘ್ನ ವಿನಾಶಕ., ಸಂಕಷ್ಟ ಪರಿಹಾರಕ., ಪಾಪ ನಾಶಕ., ಅದಿ ದೇವತೆಗಳಲ್ಲಿ ಅಗ್ರಗಣ್ಯನಾಗಿರುವ ಆದಿ ಪೂಜಿತ ಶ್ರೀ ವಿನಾಯಕನನ್ನು ನಾಡಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ಪೂಜಿಸಲಾಯಿತು. ಭಾದ್ರಪದ ಶುಕ್ಲ ಚೌತಿಯಂದು ಗಣಪತಿ ದೇವಾಲಯಗಳು ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಇದರೊಂದಿಗೆ ದೇವಾಲಯಗಳು, ಸಂಘ-ಸAಸ್ಥೆಗಳ ವತಿಯಿಂದ ಸಾರ್ವಜನಿಕವಾಗಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಣಪತಿ ಹೋಮ, ವಿಶೇಷ ಪೂಜೆಗಳು ನೆರವೇರಿದವು. ಉತ್ಸವದ ಅಂಗವಾಗಿ ವಿವಿಧೆಡೆಗಳಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕ್ರೀಡಾಕೂಟಗಳನ್ನು ಕೂಡ ಏರ್ಪಡಿಸಲಾಗಿತ್ತು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆಯೊಂದಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಕೋಟೆ ಗಣಪತಿ
ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣದಲ್ಲಿರುವ ಐತಿಹಾಸಿಕ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಗಣಪನಿಗೆ ಗರಿಕೆ, ಹಣ್ಣುಕಾಯಿ, ಈಡುಗಾಯಿ ಸೇವೆಯೊಂದಿಗೆ ಗಣಪನನ್ನು ಪ್ರಾರ್ಥಿಸಿದರು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಭಕ್ತರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವದರೊಂದಿಗೆ ದೇವಾಲಯವನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಪೂಜೆಯಲ್ಲಿ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ದೇವಾಲಯ ಸಮಿತಿಯ ಸದಸ್ಯರೂ ಆಗಿರುವ ಸಂತೋಷ್ ಭಟ್ ಮಾರ್ಗದರ್ಶನದಲ್ಲಿ ಅರ್ಚಕ ವೃಂದದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ಸೇರಿದಂತೆ ಸದಸ್ಯರುಗಳು ಉಸ್ತುವಾರಿ ವಹಿಸಿದ್ದರು.
ವಿಜಯ ವಿನಾಯಕ
ನಗರದ ವಿಜಯನಗರದಲ್ಲಿರುವ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿಯೂ ಗೌರಿ-ಗಣೇಶ ಉತ್ಸವದ ಅಂಗವಾಗಿ ವಿಶೇಷ಼ ಪೂಜಾ ಕೈಂಕರ್ಯಗಳು ನೆರವೇರಿದವು. ದೇವರಿಗೆ ಅಲಂಕಾರ, ಸಾಮೂಹಿಕ ಗಣಹೋಮದೊಂದಿಗೆ ವಿಶೇಷ ಪೂಜಾದಿಗಳು ನೆರವೇರಿದವು. ಮಹಾ ಮಂಗಳಾರತಿಯೊAದಿಗೆ ಪ್ರಸಾದ ವಿತರಣೆ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ವಿನಾಯಕನ ಕೃಪೆಗೆ ಪಾತ್ರರಾದರು. ದೇವಾಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಟ್ರಸ್ಟ್ ಅಧ್ಯಕ್ಷ ಕೆ.ಬಿ. ಪೂಣಚ್ಚ ನೇತೃತ್ವದಲ್ಲಿ ಟ್ರಸ್ಟಿಗಳು ವ್ಯವಸ್ಥೆ ಕಲ್ಪಿಸಿದ್ದರು.
ದೃಷ್ಠಿ ಗಣಪತಿ
ಇನ್ನುಳಿದಂತೆ ಮಡಿಕೇರಿಯ ಕನ್ನಂಡಬಾಣೆಯಲ್ಲಿರುವ ರಾಜ್ಯದ ಏಕೈಕ ದೃಷ್ಠಿ ಗಣಪತಿ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಾಲಯದ ಅರ್ಚಕ ಶೈಲೇಶ್ ಶಾಸ್ತಿç ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ನೇತೃತ್ವದಲ್ಲಿ ಪದಾಧಿಕಾರಿಗಳು, ಸದಸ್ಯರುಗಳು ಭಕ್ತರಿಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಇನ್ನುಳಿದಂತೆ ನಗರದ ದೇಚೂರು ಶ್ರೀ ವಿದ್ಯಾಗಣಪತಿ ರಾಮ ಮಂದಿರ, ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯ, ವಿದ್ಯಾನಗರದ ಶ್ರೀ ಶಕ್ತಿ ಗಣಪತಿ ದೇವಾಲಯ, ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ, ಪ್ರಾರ್ಥನೆಗಳೊಂದಿಗೆ ಗಣಪನನ್ನು ಆರಾಧಿಸಲಾಯಿತು. ಇದರೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ದೇವಾಲಯ, ಸಂಘ ಸಂಸ್ಥೆಗಳ ವತಿಯಿಂದ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಆರಾಧಿಸಲಾಗಿದೆ.