ಮಡಿಕೇರಿ, ಸೆ. ೧೫: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಸಂಪಾಜೆ ಹೋಬಳಿಗೆ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಇಂದು ಭೇಟಿ ನೀಡಿದ್ದರು.
ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಜನತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ನೀಡಲು ಸಂಪಾಜೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಮಾರು ರೂ ೨೦ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ೩೩/೧೧ ಕೆವಿ ವಿದ್ಯುತ್ ಪ್ರಸರಣಾ ಕೇಂದ್ರದ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ಈ ಭಾಗದ ಸಂಪಾಜೆ, ಚೆಂಬು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಈ ಕಾಮಗಾರಿಯಿಂದ ಸಾಧ್ಯವಾಗಲಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಇಲ್ಲಿನ ಲಘು ಉದ್ಯಮಗಳಿಗೂ ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಪೆರಾಜೆಯಲ್ಲಿ ಸುಮಾರು ರೂ. ೨೦ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ೩೩/೧೧ ಕೆವಿ ವಿದ್ಯುತ್ ಪ್ರಸರಣಾ ಕೇಂದ್ರದ ಕಾಮಗಾರಿಯನ್ನು ಪೊನ್ನಣ್ಣ ಪರಿಶೀಲಿಸಿದರು.
ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೌಕತ್ ಆಲಿ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕನ್ಯಾನ, ಮಾಜಿ ಅಧ್ಯಕ್ಷ ಇಸ್ಮಾಯಿಲ್, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಸುರೇಶ್ ಸಂಪಾಜೆ, ಹನೀಫ್ ಎಸ್ ಪಿ, ಜಾಫರ್, ರಿತಿನ್, ಮೊಯ್ದು ಕುಂಞÂ, ಮುಸ್ತು ಗುಂಜಲ, ಚೆನಿಯಪ್ಪ ಕುದುರೆಪಾಯ, ಚೆನ್ನಪ್ಪ ನಡುಬೆಟ್ಟು, ರವಿರಾಜ್ ಹೊಸೂರು, ಪೆರುಮುಂಡ ಜಯರಾಮ್, ತುಳಸಿ, ಗಾಂಧಿ ಪ್ರಸಾದ್, ಮನು ಪೆರುಮುಂಡ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಹಾಜರಿದ್ದರು.