ಗೋಣಿಕೊಪ್ಪಲು, ಸೆ. ೧೫: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೮ನೇ ವರ್ಷದ ದಸರಾ ಉತ್ಸವದ ಪೂರ್ವಭಾವಿ ಸಭೆಯು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆಯ ಭಗವತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ೪೮ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕಾರ್ಯಾಧ್ಯಕ್ಷರಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಕಳೆದ ಸಾಲಿನ ಕಾವೇರಿ ದಸರಾ ಸಮಿತಿ ಅಧ್ಯಕ್ಷರಾಗಿದ್ದ ಕುಲ್ಲಚಂಡ ಪ್ರಮೋದ್ ಗಣಪತಿ ಅವರನ್ನು ನೇಮಕ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತ ನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಸರ್ಕಾರದ ವತಿಯಿಂದ ಗೋಣಿಕೊಪ್ಪ ದಸರಾ ಜನೋತ್ಸವದ ಯಶಸ್ಸಿಗೆ ರೂ.೧ ಕೋಟಿ ಅನುದಾನ ಲಭಿಸಿದೆ. ದಸರಾ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗೋಣಿಕೊಪ್ಪ ದಸರಾವನ್ನು ಮಾದರಿ ಉತ್ಸವವನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ವಿವಿಧ ದಸರಾ ಮಂಟಪ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾತನಾಡಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಕಾವೇರಿ ದಸರಾ ಸಮಿತಿಗೆ ಶಾಸಕ ಎ.ಎಸ್.ಪೊನ್ನಣ್ಣ ಅವರೇ ಅಧ್ಯಕ್ಷರಾಗಬೇಕೆಂದು ಒತ್ತಾಯಿಸಿದರು.
೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ದಸರಾ ಉತ್ಸವದ ಯಶಸ್ಸಿಗಾಗಿ ದಶಮಂಟಪಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು ಹಾಗೂ ಶೋಭಾಯಾತ್ರೆಯಂದು ನಡೆಯುವ ಬಹುಮಾನ ವಿತರಣೆಯಲ್ಲಿ ನಗದು ಬಹುಮಾನವನ್ನು ಹೆಚ್ಚಿಸಬೇಕು ಎಂದು ಮಂಟಪಗಳ ಪದಾಧಿಕಾರಿಗಳು ಮನವಿ ಮಾಡಿದರು. ದಸರಾ ಉತ್ಸವವನ್ನು ಯಶಸ್ವಿಗೊಳಿಸಲು ದಶಮಂಟಪಗಳು ಸಂಪೂರ್ಣ ಸಹಕಾರ ನೀಡಲಿವೆ ಎಂದು ಭರವಸೆ ನೀಡಿದರು.
ಕಳೆದ ಸಾಲಿನ ದಶಮಂಟಪ ಸಮಿತಿ ಅಧ್ಯಕ್ಷ ಶಾಜಿ ಅಚ್ಚುತ್ತನ್ ಮಾತನಾಡಿ, ಕಳೆದ ಬಾರಿಯ ಶೋಭಾಯಾತ್ರೆ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಉಂಟಾಗಿದ್ದವು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚರಿಕೆ ವಹಿಸಿ ದಸರಾ ಉತ್ಸವದ ಯಶಸ್ಸಿಗೆ ಕೈಜೋಡಿಸಬೇಕು ಎಂದರು.
ಕಳೆದ ಸಾಲಿನ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಅಜಿತ್ ಅಯ್ಯಪ್ಪ ಮಾತನಾಡಿ, ಪ್ರಸಕ್ತ ಸಾಲಿನ ದಸರಾ ಉತ್ಸವವನ್ನು ಮುನ್ನಡೆಸಲು ಶಾಸಕ ಎ.ಎಸ್.ಪೊನ್ನಣ್ಣ ಅವರು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಾರ್ಯಾಧ್ಯಕ್ಷರಾಗಿ ಪ್ರಮೋದ್ ಗಣಪತಿ ಅವರನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಮಾತನಾಡಿ, ದಸರಾ ಉತ್ಸವವನ್ನು ಅತ್ಯಂತ ಜವಾಬ್ದಾರಿಯಿಂದ, ಶಿಸ್ತುಬದ್ಧವಾಗಿ ಹಾಗೂ ಭಕ್ತಿಪೂರ್ವಕವಾಗಿ ನಡೆಸಬೇಕು. ಹಲವು ಬಾರಿ ಸಮಿತಿಯ ಅಧ್ಯಕ್ಷರಾಗಿ ದಸರಾ ಉತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿರುವ ಕುಲ್ಲಚಂಡ ಪ್ರಮೋದ್ ಗಣಪತಿ ಅವರು ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿ. ಶಾಸಕ ಎ.ಎಸ್.ಪೊನ್ನಣ್ಣ ಅವರು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಪ್ರಸ್ತಾಪಿಸಿದರು. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಒಮ್ಮತ ಸೂಚಿಸಿದರು.
ಇದರೊಂದಿಗೆ ಪ್ರಸಕ್ತ ಸಾಲಿನ ಗೋಣಿಕೊಪ್ಪ ದಸರಾ ಉತ್ಸವವು ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆ ಹಾಗೂ ಕುಲ್ಲಚಂಡ ಪ್ರಮೋದ್ ಗಣಪತಿ ಅವರ ಕಾರ್ಯಾಧ್ಯಕ್ಷತೆಯಲ್ಲಿ ನಡೆಸಲು ನಿರ್ಧರಿಸಲಾಯಿತು.
ಕಳೆದ ಸಾಲಿನ ಶೋಭಾಯಾತ್ರೆ ಸಂದರ್ಭದಲ್ಲಿ ಕೆಲವು ಮಂಟಪಗಳು ಲೈಟ್ ಆಫ್ ಮಾಡಿದ್ದರಿಂದ ಸಾರ್ವಜನಿಕರಿಗೆ ನಿರಾಸೆಯಾಗಿತ್ತು. ಮುಂದಿನ ದಸರಾದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯ ಹಿರಿಯ ಸದಸ್ಯ ಪಿ.ಕೆ.ಪ್ರವೀಣ್ ಸಭೆಯ ಗಮನ ಸೆಳೆದರು. ಅಲ್ಲದೆ, ದಶಮಂಟಪಗಳ ತೀರ್ಪುಗಾರಿಕೆಗೆ ಉತ್ತಮ ಹಾಗೂ ಅನುಭವಿ ತೀರ್ಪುಗಾರರನ್ನು ನೇಮಿಸುವಂತೆ ಮಂಟಪಗಳ ಅಧ್ಯಕ್ಷರುಗಳು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಕಾವೇರಿ ದಸರಾ ಸಮಿತಿಯ ಲೆಕ್ಕಪತ್ರಗಳನ್ನು ಪರಿಶೀಲಿಸಲು ಇಲಾಖೆಯ ವತಿಯಿಂದ ಅಧಿಕಾರಿಯನ್ನು ನೇಮಿಸಲಾಗುವುದು. ಸಮಿತಿಯಲ್ಲಿ ವಿವಿಧ ಭಾಗಗಳ ಆಸಕ್ತರು ಹಾಗೂ ಅನುಭವಿಗಳನ್ನು ಒಳಗೊಂಡAತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಉಪಸಮಿತಿಗಳು ಸೇರಿದಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ದಸರಾ ಉತ್ಸವದ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್, ಪ್ರಮುಖರಾದ ಕೆ.ರಾಜೇಶ್, ಮುರುಗ, ಪ್ರಭಾಕರ್ ನೆಲ್ಲಿತ್ತಾಯ, ಮಳವಂಡ ಅರವಿಂದ್ ಕುಟ್ಟಪ್ಪ, ಕುಪ್ಪಂಡ ತಿಮ್ಮಯ್ಯ, ಹೆಚ್.ಆರ್.ಪರಶುರಾಮ್, ಸಜನ್ ಕೆ.ಪಿ.ಅಬ್ದುಲ್ ಜಲೀಲ್, ಹೆಚ್.ಎಸ್.ಸಜನ್, ಹಿರಿಯರಾದ ಮಳವಂಡ ಅರವಿಂದ್ ಕುಟ್ಟಪ್ಪ, ಎಂ.ಪಿ.ಕೇಶವ್ ಕಾಮತ್, ಪಿ.ಕೆ.ಪ್ರವೀಣ್, ಪ್ರಭಾಕರ್ ನೆಲ್ಲಿತ್ತಾಯ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಎಂ.ಮAಜುಳ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶ್ರೀ ಕಾವೇರಿ ದಸರಾ ಸಮಿತಿಯ ಕಳೆದ ಸಾಲಿನ ಕಾರ್ಯದರ್ಶಿ ಎನ್.ಎಸ್.ಕಂದಾ ದೇವಯ್ಯ ಸ್ವಾಗತಿಸಿದರು. ಸಂಯೋಜಕಿ ಮನೆಯಪಂಡ ಶೀಲಾ ಬೋಪಣ್ಣ ವಂದಿಸಿದರು.