ಮಡಿಕೇರಿ, ಸೆ. ೧೫: ಕೊಡವ ಆಚಾರ ವಿಚಾರದಲ್ಲಿ ಪರಿಪಾಲಿಸಲ್ಪಡುವ ಹಬ್ಬಗಳಲ್ಲಿ ಒಂದಾದ ಕೈಲ್ಪೊಳ್ದ್ ಅನ್ನು ಸಾಂಪ್ರದಾಯಿಕವಾಗಿ ಆಚರಿಸುವುದರೊಂದಿಗೆ ಇದರ ಜೊತೆಗೆ ಜನಾಂಗದವರು ಮಾಡುವ ಸೇವೆ-ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಬೆಂಗಳೂರು ಕೊಡವ ಸಮಾಜ ವಿಶೇಷ ಕಾಳಜಿ ತೋರುತ್ತಿದೆ. ಈ ಚಿಂತನೆಯ ಮೂಲಕ ವರ್ಷಂಪ್ರತಿ ಕೈಲ್ಪೊಳ್ದ್ ಒತ್ತೋರ್ಮೆ ಕೂಟವನ್ನು ಸಮಾಜದ ವತಿಯಿಂದ ಅದ್ದೂರಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಭಾನುವಾರ ಬೆಂಗಳೂರು ಕೊಡವ ಸಮಾಜದಲ್ಲಿ ಕಾರ್ಯಕ್ರಮ ಜರುಗಿತು.
ಹಬ್ಬದ ವಿಶೇಷತೆಯಾದ ಕೋವಿ-ಕತ್ತಿ ಕೃಷಿ ಪರಿಕರಗಳ ಪೂಜೆಯೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ವಿಶೇಷವಾಗಿ ಶೈಕ್ಷಣಿಕವಾದ ಸಾಧನೆ, ಇನ್ನಿತರ ಕ್ಷೇತ್ರಗಳಲ್ಲಿನ ಪ್ರತಿಭೆಗಳ ಗುರುತಿಸುವಿಕೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ-ಗೌರವದೊಂದಿಗೆ ವರ್ಷಂಪ್ರತಿಯAತೆ ಈ ಬಾರಿಯೂ ಕೈಲ್ಪೊಳ್ದ್ ಸಂಭ್ರಮಾಚರಣೆ ನಡೆಯಿತು. ಬೆಂಗಳೂರು ಸಮಾಜದ ಸದಸ್ಯರು ಅಲ್ಲಿನ ವಿವಿಧ ಕೊಡವ ಸಂಘಗಳ ಪ್ರಮುಖರು ಸೇರಿದಂತೆ ಕೊಡಗು ಸೇರಿದಂತೆ ವಿವಿಧೆಡೆಗಳಿಂದ ದೊಡ್ಡಸಂಖ್ಯೆಯಲ್ಲಿ ಜನರು-ವಿದ್ಯಾರ್ಥಿಗಳು, ಸಾಧಕರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಮುಖ ಭಾಗವಾಗಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ಗಳು, ಪಿಹೆಚ್ಡಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹರದಾಸ ಅಪ್ಪಚ್ಚಕವಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಿಸುಮಾರು ೨೧೧ ಮಂದಿಯನ್ನು ಒಂದೇ ವೇದಿಕೆಯಲ್ಲಿ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು. ಪ್ರತಿ ಸಾಧಕರಿಗೂ ದುಬಾರಿ ಮೊತ್ತದ ಕೊಡವ ಸಂಸ್ಕೃತಿ ಪ್ರತೀಕವಾದ ತೂಕ್ಬೊಳ್ಚ ನೀಡಿ ಗೌರವಿಸಲಾಯಿತು. ಎಲ್ಲರ ಸೇವೆ-ಸಾಧನೆಯನ್ನು ವೇದಿಕೆಯಲ್ಲಿ ವಿವರವಾಗಿ ಜನತೆ ಮುಂದಿಡುವ ಪ್ರಯತ್ನವೂ ಸಾಧಕರಿಗೆ ಉತ್ತೇಜನ ನೀಡಿದಂತಿತ್ತು. ಸಮಾಜದ ಆಡಳಿತ ಮಂಡಳಿ ವಿವಿಧ ಉಪಸಮಿತಿಗಳ ಅಚ್ಚುಕಟ್ಟಾದ ನಿರ್ವಹಣೆ ಸುಧೀರ್ಘ ಕಾರ್ಯಕ್ರಮವಾದರೂ ಎಲ್ಲೂ ಲೋಪಕ್ಕೆ ಎಡೆಯಾದಂತಿತ್ತು. ಕಾರ್ಯಕ್ರಮದ ಅತಿಥಿಗಳು ಪ್ರಮುಖರನ್ನು ಒಡ್ಡೋಲಗ, ದುಡಿಕೊಟ್ಟ್ ಪಾಟ್ ಸಹಿತವಾಗಿ ವೇದಿಕೆಗೆ ಕರೆತರಲಾಯಿತು. ಬಳಿಕ ಆಯುಧಪೂಜೆಯೊಂದಿಗೆ ಒಕ್ಕಣೆ ಕಟ್ಟಿ ಪ್ರಾರ್ಥಿಸಲಾಯಿತು. ಈ ಬಾರಿಯ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್, ಪರಿಸರ ಪ್ರೇಮಿ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ, ನೆಕ್ಟರ್ಫ್ರೆಶ್ ಸಂಸ್ಥೆಯ ಸಂಸ್ಥಾಪಕಿ ಕುಪ್ಪಂಡ ಛಾಯಾ ನಂಜಪ್ಪ ಪಾಲ್ಗೊಂಡಿದ್ದರು. ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಚಿರಿಯಪಂಡ ಆಶಾ ವಿವೇಕ್, ಕಾರ್ಯದರ್ಶಿ ಬೇರೆರ ಮಧು ಅಯ್ಯಣ್ಣ, ಜಂಟಿ ಕಾರ್ಯದರ್ಶಿ ಚೊಟ್ಟೆಯಂಡ ಆರತಿ ಅಯ್ಯಮ್ಮ, ಖಜಾಂಚಿ ಚೇಮಿರ ಸಿ ಪೊನ್ನಪ್ಪ, ಜಂಟಿ ಖಜಾಂಚಿ ಮಲ್ಲೇಂಗಡ ಎಸ್ ಮುತ್ತಣ್ಣ ಪಾಲ್ಗೊಂಡಿದ್ದರು.
ವಿವಿಧ ಕೊಡವ ಸಂಘಗಳ ಪ್ರಮುಖರು, ಸಮಿತಿಗಳ ಪ್ರಮುಖರು, ಕೊಡವ ಸಮಾಜ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಾಲ್ಗೊಂಡಿದ್ದ ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಪರಾಹ್ನ ಕೊಡವ ಕ್ವಿಜ್ ಪೈಪೋಟಿ, ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿಯ ಆಟ್-ಪಾಟ್ ಪಡಿಪು ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ, ಮಾಳೇಟಿರ ಅಜಿತ್, ಚೆಕ್ಕೆರ ಪಂಚಮ್, ಆಪಟ್ಟಿರ ಮೌಲ್ಯ ಅವರಿಂದ ಹಾಡುಗಾರಿಕೆ ನಡೆಯಿತು. ಮೇವಡ ಕಾವೇರಿ ಪ್ರಾರ್ಥಿಸಿ, ಕಾರ್ಯದರ್ಶಿ ಬೇರೆರ ಮಧು ಅಯ್ಯಣ್ಣ ಸ್ವಾಗತಿಸಿದರು. ಚೊಟ್ಟೆಯಂಡ ಆರತಿ, ಮುಲ್ಲೇಂಗಡ ಮುತ್ತಣ್ಣ ಅತಿಥಿ ಪರಿಚಯಿಸಿದರು. ಮಚ್ಚಮಾಡ ಲಾಲ ಕುಟ್ಟಪ್ಪ ಸಾಧಕರ ವಿವರ ನೀಡಿದರೆ, ಮೀದೇರಿರ ಟಾಯ್ಸಿಪೂವಣ್ಣ, ಬೊಳ್ಳೆರ ಪೃಥ್ವಿ ಪೂಣಚ್ಚ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಚಿರಿಯಪಂಡ ಆಶಾ ವಿವೇಕ್ ವಂದಿಸಿದರು. ಕೊನೆಯಲ್ಲಿ ಸಾಮೂಹಿಕವಾದ ವಾಲಗತಾಟ್ ಸಂಭ್ರಮದೊAದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾಯಪಂಡ ಶಶಿ ಸೋಮಯ್ಯ