ಸೋಮವಾರಪೇಟೆ, ಸೆ. ೧೫: ಶತಮಾನಗಳ ಹಿಂದೆ ಏಳುಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಭೀಕರ ಬರಗಾಲ ಬಂದು ಊರಿನಲ್ಲಿದ್ದ ಬೃಹತ್ ಕೆರೆಯಲ್ಲೂ ಹನಿ ನೀರು ಸಿಗದಾದಾಗ, ಸಾಕ್ಷಾತ್ ಜಲದೇವತೆಯಾಗಿ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನದಂದು ನೂರಾರು ಮಂದಿ ಬಾಗಿನ ಅರ್ಪಿಸಿದರೆ, ಸಾವಿರಾರು ಮಂದಿ ಶ್ರೀ ಹೊನ್ನಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸ್ವರ್ಣಗೌರಿ ಹಬ್ಬದಲ್ಲಿ ಭಾಗಿಯಾದರು.
ಹೊನ್ನಿನ ಗುಣದ ಹೊನ್ನಮ್ಮ, ಗ್ರಾಮೋದ್ಧಾರಕ್ಕೆ ಕೆರೆಗೆ ಹಾರವಾದ ಐತಿಹ್ಯ ಹೊಂದಿರುವ ಹೊನ್ನಮ್ಮನ ಕೆರೆ ಅಂದಿನಿAದ ಇಂದಿನವರೆಗೂ ಬತ್ತದಿರುವುದು ವಿಶೇಷ. ಎಂದೂ ಬತ್ತದ ಕೆರೆಗೆ ಸ್ವರ್ಣ ಗೌರಿ ಹಬ್ಬದಂದು ವಿಶೇಷ ಪೂಜೆ ಸಲ್ಲಿಸುವುದು ಒಂದೆಡೆಯಾದರೆ, ನವದಂಪತಿಗಳ ನೂರಾರು ಜೋಡಿ ಆಗಮಿಸಿ ಬಾಗಿನ ಅರ್ಪಿಸುವುದು ಮತ್ತೊಂದು ವಿಶೇಷತೆ.
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸುವದು ಹಿಂದಿನಿAದಲೂ ನಡೆದುಕೊಂಡು ಬಂದ ಪದ್ಧತಿ. ಸ್ವರ್ಣಗೌರಿ ಹಬ್ಬದ ದಿನದಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಕ್ಷೇತ್ರದಲ್ಲಿರುವ ಶ್ರೀ ಹೊನ್ನಮ್ಮ ತಾಯಿ, ಬಸವೇಶ್ವರ ಗುಡಿಯಿರುವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಗಿನ(ಮೊರದಲ್ಲಿ ಅರಸಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಳೆ, ಹೂವು, ಫಲತಾಂಬೂಲ) ವನ್ನು ದೇವಾಲಯದ ಪಕ್ಕದಲ್ಲಿರುವ ಬಂಗಾರದ ಕಲ್ಲಿನ ಕಟ್ಟೆಯ ಮೇಲಿಟ್ಟು ಪೂಜೆ ಸಲ್ಲಿಸಿದ ನಂತರ ಮೊದಲು ಹೊನ್ನಮ್ಮನ ಕುಟುಂಬಸ್ಥರು ಬಾಗಿನ ಅರ್ಪಿಸಿದರು.
ನಂತರ ಶ್ರೀ ಸಿದ್ದೇಶ್ವರ ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿಯವರು ಕೆರೆಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಗ್ರಾಮ ಸಮಿತಿ ಅಧ್ಯಕ್ಷ ಎಂ.ಬಿ. ಚಂದ್ರಶೇಖರ್, ಮಾಜಿ ಅಧ್ಯಕ್ಷ ಉದಯ ಸೇರಿದಂತೆ ಇತರರು ಬಾಗಿನ ಅರ್ಪಿಸಿದರು.
ದೇವಾಲಯಕ್ಕೆ ಬಂದ ಭಕ್ತಾದಿಗಳು ೯೦೦ ಅಡಿ ಎತ್ತರದ ಗವಿಬೆಟ್ಟ ಹತ್ತಿ ಪ್ರಕೃತಿ ಸೌಂದರ್ಯ ವೀಕ್ಷಿಸಿದರು. ದೇವಾಲಯ ಸಮಿತಿಯ ಆಶ್ರಯದಲ್ಲಿ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಾಲಯ ಸಮಿತಿಯ ಅಧ್ಯಕ್ಷ ಎಂ.ಬಿ. ಚಂದ್ರಶೇಖರ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಪದಾಧಿಕಾರಿಗಳಾದ ಡಿ.ಬಿ. ವೀರೇಶ್, ಡಿ.ಎಂ. ಪ್ರಸನ್ನ, ಡಿ.ಟಿ. ಭರತ್, ಎಂ.ಬಿ. ವಸಂತ್‌ಕುಮಾರ್, ಎಂ.ವಿ. ವಿವೇಕ್, ಡಿ.ಬಿ. ಪ್ರಭುವೇದ್, ಡಿ.ಎಸ್. ಬೋಪಯ್ಯ, ಹೆಚ್.ವಿ.ಗಣೇಶ್, ಕವನ್, ಸೇರಿದಂತೆ ಸದಸ್ಯರುಗಳು ಉತ್ಸವದ ಉಸ್ತುವಾರಿ ವಹಿಸಿದ್ದರು. ಅರ್ಚಕ ವೀರಯ್ಯ ಹಿರೇಮಠ್ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆದವು. ಅರ್ಚಕರಾದ ಕಿರಣ್ ಮತ್ತು ರೇವಣ್ಣ ಅವರುಗಳು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಜಾತ್ರೋತ್ಸವ ಹಾಗೂ ಹಬ್ಬದ ದಿನವಾದ ಹಿನ್ನೆಲೆ ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದರು. ಪೊಲೀಸ್ ವೃತ್ತ ನಿರೀಕ್ಷಕ ಮುದ್ದು ಮಹದೇವ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಇದರೊಂದಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
- ವಿಜಯ್ ಹಾನಗಲ್