ಸಿದ್ದಾಪುರ, ಸೆ. ೧೫: ತೋಟದೊಳಗೆ ಬೆಳೆಸಿದ್ದ ಅವಕಾಡೊ (ಬಟರ್ ಫ್ರೂಟ್) ಚಿಗುರುಗಳನ್ನು ಹಾಗೂ ಕಾಯಿಗಳನ್ನು ಕಳ್ಳತನ ಮಾಡಿದ ಆರೋಪದಡಿಯಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆಲ್ಲಿಹುದಿಕೇರಿ ಗ್ರಾಮದ ಶಾಲೆ ರಸ್ತೆ ನಿವಾಸಿ ಹಾಗೂ ಉದ್ಯಮಿ ಕೆ.ಬಿ. ಹಸೈನಾರ್ ಎಂಬವರಿಗೆ ಸೇರಿದ ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿರುವ ಕಾಫಿ ತೋಟದೊಳಗೆ ಕೃಷಿ ಮಾಡಿ ಬೆಳೆಸಿದ್ದ ಅವಕಾಡೊ (ಬೆಣ್ಣೆ ಹಣ್ಣು)ಗಿಡಗಳಿಂದ ಇತ್ತೀಚೆಗೆ ಚಿಗುರು ಹಾಗೂ ಕಾಯಿಗಳನ್ನು ಕಳ್ಳತನ ಮಾಡಿದ ಬಗ್ಗೆ ಹಸ್ಯೆನಾರ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತನಿಖಾ ತಂಡವು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ತೋಟದೊಳಗೆ ಅಕ್ರಮ ಪ್ರವೇಶ ಮಾಡಿ ಸುಮಾರು ರೂ. ೬೦ ಸಾವಿರಕ್ಕೂ ಅಧಿಕ ಮೌಲ್ಯದ ಅವಕಾಡೊ ಚಿಗುರುಗಳನ್ನು ಹಾಗೂ ಕಾಯಿಗಳನ್ನು ಕಳ್ಳತನ ಮಾಡಿದ ಆರೋಪಿಗಳಾದ ತ್ಯಾಗತ್ತೂರು ಗ್ರಾಮದ ನಿವಾಸಿಗಳಾದ ಸಿದ್ದೀಕ್, ನಿಸಾರ್, ಹ್ಯಾರೀಸ್, ಕೂಡ್ಲೂರು - ಚೆಟ್ಟಳ್ಳಿ ನಿವಾಸಿಗಳಾದ ವಿನೋದ್, ಶಕೀರ್ ಎಂಬ ಐವರನ್ನು ಬಂಧಿಸಿದ್ದಾರೆ. ಐವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮತ್ತು ಮಡಿಕೇರಿ ವಿಭಾಗದ ಉಪ ವಿಭಾಗದ ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ, ಸಿ.ಐ. ಮತ್ತು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಾಜೇಶ್, ಭರತ್, ಮಣಿಕಂಠ ಇನ್ನಿತರರು ಪಾಲ್ಗೊಂಡಿದ್ದರು.