ಸಿದ್ದಾಪುರ, ಸೆ. ೧೩: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಹಾಗೂ ಸಮಸ್ಯೆಗಳನ್ನು ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಮಾತನಾಡಿ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಇವುಗಳನ್ನು ಅಭಿವೃದ್ಧಿಪಡಿಸಿಕೊಡಬೇಕೆಂದು ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಒತ್ತಾಯಿಸಿದರು. ನೆಲ್ಲಿಹುದಿಕೇರಿ ಗ್ರಾಮದ ಮುಖ್ಯರಸ್ತೆಯ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲವರು ವ್ಯಾಪಾರ ಮಾಡುತ್ತಿರುವುದರಿಂದ ವಾಹನಗಳ ನಿಲುಗಡೆಗೆ ಸಮಸ್ಯೆಯಾಗಿದೆ. ಅವರುಗಳ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗ್ರಾಮದ ಮೀನಿನ ವ್ಯಾಪಾರಸ್ಥರು ಮೀನಿನ ತ್ಯಾಜ್ಯ ಹಾಗೂ ನೀರನ್ನು ಸಿದ್ದಾಪುರದ ಕಾವೇರಿ ನದಿಗೆ ಚರಂಡಿಗಳ ಮುಖಾಂತರ ನೇರವಾಗಿ ಹರಿಯಬಿಡುತ್ತಿದ್ದು, ಇದರಿಂದಾಗಿ ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಆರೋಪಿಸಿದರು.
ನೆಲ್ಲಿಹುದಿಕೇರಿ ಗ್ರಾಮದ ಹಸಿಮೀನು ಮಾರಾಟದ ಮಳಿಗೆಗಳಲ್ಲಿ ಗುಣಮಟ್ಟದ ತಾಜಾ ಮೀನುಗಳನ್ನು ಮಾರಾಟ ಮಾಡಲು ಸೂಚನೆಯನ್ನು ನೀಡಬೇಕೆಂದು ಹಾಗೂ ಸಂಬAಧಪಟ್ಟ ಇಲಾಖೆಗಳಿಂದ ಪರಿಶೀಲನೆ ನಡೆಸಬೇಕೆಂದು ಸಂಘಟಕರು ಶಾಸಕರ ಬಳಿ ಮನವಿ ಮಾಡಿದರು.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಪದಾಧಿಕಾರಿಗಳಾದ ಸುರೇಶ್, ಹರೀಶ್, ಸಜಿಲ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.