ನಾಪೋಕ್ಲು, ಸೆ. ೧೩: ಅಯ್ಯಂಗೇರಿ ಕುಯ್ಯಮುಡಿ ಸೇತುವೆ ತೀವ್ರ ಶಿಥಿಲಾವಸ್ತೆಯಲ್ಲಿದ್ದು ನಾಪೋಕ್ಲು- ಭಾಗಮಂಡಲ ಸಂಪೂರ್ಣ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ಗ್ರಾಮಸ್ಥರು ನಾಪೋಕ್ಲು - ಭಾಗಮಂಡಲ ಸಂಪರ್ಕಿಸುವ ಮುಖ್ಯ ರಸ್ತೆಯ ಅಯ್ಯಂಗೇರಿ ಯಲ್ಲಿ ಕುಯ್ಯಮುಡಿ ಸೇತುವೆ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಕೂಡಲೇ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವೀರಾಜಪೇಟೆ, ನಾಪೋಕ್ಲು ಕಡೆಯಿಂದ ಪುಣ್ಯಕ್ಷೇತ್ರ ಭಾಗಮಂಡಲ, ತಲಕಾವೇರಿ ಸಂಪರ್ಕಿಸುವ ಮುಖ್ಯ ರಸ್ತೆಯ ಅಯ್ಯಂಗೇರಿ ಬಳಿ ಇರುವ ಕುಯ್ಯಮುಡಿ ಸೇತುವೆ ತಡೆ ಗೋಡೆ ನಿರ್ಮಾಣಕ್ಕೆ ಬಳಸಿರುವ ಕಲ್ಲುಗಳು ಕುಸಿಯುತ್ತಿದ್ದು ತೀವ್ರ ಅಪಾಯ ಮಟ್ಟ ತಲುಪಿದೆ. ಸೇತುವೆಯ ಭೀಮ್ ಗಳಿಗೆ ಅಳವಡಿಸಿರುವ ಕಬ್ಬಿಣದ ರಾಡುಗಳು ಸಿಮೆಂಟು ಕಳಚಿ ಅಸ್ಥಿಪಂಜರದAತೆ ಕಾಣುತ್ತಿದ್ದು ಜರ್ಜರಿತಗೊಂಡು ಕುಸಿಯುವ ಹಂತ ತಲುಪಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.
ಅಪಾಯಕಾರಿ ಸ್ಥಿತಿ: ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದು, ಸೇತುವೆ ಕುಸಿದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ನಾಪೋಕ್ಲು ಮತ್ತು ಭಾಗಮಂಡಲ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ಕುಸಿದರೆ ಸುತ್ತಮುತ್ತಲಿನ ಹಲವು ಗ್ರಾಮಗಳ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಯಾವುದೇ ಅನಾಹುತ ನಡೆಯುವ ಮುನ್ನವೇ ಲೋಕೋಪಯೋಗಿ ಇಲಾಖೆ ಮತ್ತು ಸಂಬAಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತಕ್ಷಣವೇ ಸೇತುವೆಯ ಪುನರ್ನಿರ್ಮಾಣ ಅಥವಾ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ದುಗ್ಗಳ ಸದಾನಂದ