ಕುಶಾಲನಗರ, ಸೆ. ೧೩: ಕೊಡಗಿನ ತ್ರಿಭಾಷಾ ಸಾಹಿತಿ ದಿವಂಗತ ವಿ.ಎಸ್. ರಾಮಕೃಷ್ಣ ಅವರ ಸಾಹಿತ್ಯ ಕ್ಷೇತ್ರದ ಕೊಡುಗೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ತ್ರಿಭಾಷಾ ಸಾಹಿತಿ ದಿವಂಗತ ವಿ.ಎಸ್. ರಾಮಕೃಷ್ಣ ಅವರ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿ.ಎಸ್. ರಾಮಕೃಷ್ಣ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಅವರ ಸ್ಮರಣಾರ್ಥ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ವಿದ್ಯಾರ್ಥಿಗಳು ವಿ.ಎಸ್. ರಾಮಕೃಷ್ಣ ಅವರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ದಿವAಗತ ವಿ.ಎಸ್. ರಾಮಕೃಷ್ಣ ಅವರ ಬದುಕು, ಬರಹ ಹಾಗೂ ಕೃತಿಗಳ ಕುರಿತು ಮಾತನಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಗದ್ಯ ಹಾಗೂ ಕಾವ್ಯ ರಚನೆಯ ಮೂಲಕ ಸಾಹಿತ್ಯ ಕೃಷಿ ಮಾಡಿದ ರಾಮಕೃಷ್ಣ ಅವರು ಕೊಡಗಿನ ಮೇರು ಸಾಹಿತಿಯಾಗಿ ರೂಪುಗೊಂಡಿದ್ದರು. ಯುವ ಸಾಹಿತಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ‘ಜೀವನ ದರ್ಶನ’ ಕುರಿತು ‘ಸ್ವತಂತ್ರ ಭಾನು’ ಎಂಬ ಕಾವ್ಯವನ್ನು ಭೋಗ ಷಟ್ಪದಿಯಲ್ಲಿ ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದ ಹೆಗ್ಗಳಿಕೆ ರಾಮಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ಆರು ದಶಕಗಳಿಗೂ ಹೆಚ್ಚು ಕಾಲ ಕೊಡಗಿನ ನೆಲ, ಜಲ, ಪ್ರಕೃತಿ, ಪರಿಸರ, ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ತಮ್ಮ ಬರಹಗಳ ಮೂಲಕ ಪರಿಚಯಿಸಿದ ಕೀರ್ತಿ ವಿ.ಎಸ್. ರಾಮಕೃಷ್ಣ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಕುಶಾಲನಗರ ಪಟ್ಟಣದ ಕಲಾಭವನಕ್ಕೆ ತೆರಳುವ ರಸ್ತೆಗೆ ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಹೆಸರನ್ನು ನಾಮಕರಣ ಮಾಡುವಂತೆ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆ ಶೀಘ್ರ ಕಾರ್ಯರೂಪಕ್ಕೆ ಬರಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ, ಸಾಹಿತ್ಯಾಭಿರುಚಿಯಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿ, ಮಾನಸಿಕ ನೆಮ್ಮದಿ, ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಸಂಸ್ಕೃತಿಯ ಅರಿವು ಹೆಚ್ಚುತ್ತದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಕೊಡಗು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿ.ದಿನೇಶ್, ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಅವರ ಪುತ್ರ ವಿ.ಆರ್.ದಿನೇಶ್, ತಾಲೂಕು ಕ.ಸಾ.ಪ. ಸಮಿತಿ ಸದಸ್ಯ ಎಂ.ಎನ್.ಕಾಳಪ್ಪ, ಕೋಶಾಧಿಕಾರಿ ಕೆ.ವಿ. ಉಮೇಶ್, ನಿವೃತ್ತ ಹಿರಿಯ ವ್ಯವಸ್ಥಾಪಕಿ ಸೂದನ ರತ್ನಾವತಿ, ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ, ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ವಿ.ಆರ್. ದಿನೇಶ್, ಟಿ.ವಿ.ಶೈಲಾ ಇತರರು ಇದ್ದರು.