ನಾಪೋಕ್ಲು, ಸೆ. ೧೩: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫-೨೬ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, ರೂ. ೪೧.೨೧ ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.೧೧ರಷ್ಟು ಡಿವಿಡೆಂಡ್ ನೀಡುವ ಪ್ರಸ್ತಾವನೆಯನ್ನು ವಾರ್ಷಿಕ ಮಹಾಸಭೆಯ ಅನುಮೋದನೆಗೆ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ. ಅಪ್ಪಚ್ಚ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರಿಂದ ೧೮೮.೩೨ ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ. ಕ್ಷೇಮ ನಿಧಿ ಸೇರಿದಂತೆ ವಿವಿಧ ನಿಧಿಗಳಲ್ಲಿ ರೂ. ೧.೯೩ ಕೋಟಿ ಠೇವಣಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಬಂಡವಾಳದ ಪೈಕಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿನ ಪಾಲು ಹಣ, ಕ್ಷೇಮ ನಿಧಿ, ನಿರಖು ಠೇವಣಿ ಹಾಗೂ ಇತರ ಸಹಕಾರ ಸಂಸ್ಥೆಗಳಲ್ಲಿ ಪಾಲು ಮತ್ತು ಠೇವಣಿ ರೂಪದಲ್ಲಿ ಒಟ್ಟು ರೂ. ೭.೭೬ ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.
ಸದಸ್ಯರ ಅಗತ್ಯಕ್ಕೆ ಅನುಗುಣವಾಗಿ ಕೆಸಿಸಿ ಹಾಗೂ ಫಸಲು ಸಾಲ ಸೇರಿದಂತೆ ೨೦೨೫-೨೬ನೇ ಸಾಲಿನಲ್ಲಿ ರೂ. ೧೦.೬೯ ಕೋಟಿ ಸಾಲ ಹಾಗೂ ರೂ. ೧.೯೮ ಕೋಟಿ ಜಾಮೀನು ಸಾಲ ವಿತರಿಸಲಾಗಿದೆ. ಕೃಷಿ ಹಾಗೂ ಅಗತ್ಯ ವಸ್ತುಗಳ ಮಾರಾಟದಲ್ಲಿಯೂ ಸಂಘ ಉತ್ತಮ ವಹಿವಾಟು ನಡೆಸಿದೆ ಎಂದು ಹೇಳಿದರು.
೨೦೨೫-೨೬ನೇ ಸಾಲಿನಲ್ಲಿ ರಸಗೊಬ್ಬರ, ಕೃಷಿ ಉಪಕರಣಗಳು, ಕ್ರಿಮಿನಾಶಕಗಳು ಹಾಗೂ ಇತರ ಅಗತ್ಯ ಸಾಮಗ್ರಿಗಳ ಮಾರಾಟದಿಂದ ರೂ. ೨.೦೧ ಕೋಟಿ ವಹಿವಾಟು ನಡೆಸಿ ರೂ. ೯.೧೪ ಲಕ್ಷ ವ್ಯಾಪಾರ ಲಾಭ ಗಳಿಸಲಾಗಿದೆ ಎಂದು ತಿಳಿಸಿದರು.
ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.೮೫ ಹಾಗೂ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.೮೦ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳ ಪೋಷಕರು ಸೆ.೧೫ರೊಳಗೆ ಅಂಕಪಟ್ಟಿಯನ್ನು ಸಂಘಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.
ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೫೦ನೇ ವಾರ್ಷಿಕ ಮಹಾಸಭೆ ತಾ.೧೯ರಂದು ಸಂಘದ ಕಟ್ಟಡದ ಸಭಾಂಗಣದಲ್ಲಿ ನಡೆಯಲಿದೆ. ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಚೀಯಕಪೂವಂಡ. ವಿ. ರೀನಾ, ಸಂಘದ ನಿರ್ದೇಶಕರಾದ ಬದ್ದಂಜೆಟ್ಟಿರ ಎ. ತಿಮ್ಮಯ್ಯ, ಐರೀರ ಜಿ. ಟಿಂಶ, ಚೀಯಕಪೂವಂಡ ಡಿ. ನಾಚಪ್ಪ, ಕರವಂಡ ಜಿ. ಅಪ್ಪಣ್ಣ, ಮಚ್ಚುರ ಎಂ. ರವೀಂದ್ರ, ಮಣವಟ್ಟಿರ ಬಿ. ದೀಪಕ್ ಪೊನ್ನಪ್ಪ, ಮಣವಟ್ಟಿರ ಕೆ. ದಯಾ ಚಿಣ್ಣಪ್ಪ, ಚೀಯಕಪೂವಂಡ ಎ. ಸುನಿಲ್, ಮಣವಟ್ಟೀರ ಎನ್ ಕುಶಾಲಪ್ಪ, ಅಪ್ಪುಮಣಿಯಂಡ ಬಿ. ಕಾವೇರಮ್ಮ, ಪಿ .ಎಂ. ವಿಜು ಉಪಸ್ಥಿತರಿದ್ದರು.