ಚೆಟ್ಟಳ್ಳಿ, ಸೆ. ೧೩: ಶಾಸಕ ಡಾ. ಮಂತರ್ ಗೌಡ ಅವರ ವಿಶೇಷ ಅನುದಾನದಡಿ ಚೆಟ್ಟಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಇನ್ನೂ ಹಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ವಲಯ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫಿ ಟಿ.ಎಂ. ತಿಳಿಸಿದ್ದಾರೆ. ಪುತ್ತರಿರ ಐನ್‌ಮನೆ ರಸ್ತೆ ಅಭಿವೃದ್ಧಿಗೆ ರೂ. ೬ ಲಕ್ಷ, ಶ್ರೀಮಂಗಲ ಭಗವತಿ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ರೂ. ೭ ಲಕ್ಷ, ಮುಳ್ಳಂಡ ಐನ್‌ಮನೆ ರಸ್ತೆ ಅಭಿವೃದ್ಧಿಗೆ ರೂ. ೭ ಲಕ್ಷ, ಅಯ್ಯಂಡ್ರ ಐನ್‌ಮನೆ ರಸ್ತೆ ಅಭಿವೃದ್ಧಿಗೆ ರೂ. ೫ ಲಕ್ಷ, ನೂಜಿಬೈಲು ರಸ್ತೆ ಅಭಿವೃದ್ಧಿಗೆ ರೂ. ೫ ಲಕ್ಷ ಹಾಗೂ ಈರಳೆ ಭಗವತಿ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ರೂ. ೫ ಲಕ್ಷ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಕಿರು ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಪೊನ್ನತ್‌ಮೊಟ್ಟೆ ನ್ಯಾಯಬೆಲೆ ಅಂಗಡಿ ಪಕ್ಕದ ಗದ್ದೆ ರಸ್ತೆಗೆ ೧೦ ಲಕ್ಷ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಕಂಡಕರೆ ರಸ್ತೆಗೆ ರೂ. ೫ ಲಕ್ಷ, ಅಯ್ಯಪ್ಪ ದೇವಸ್ಥಾನದಿಂದ ಸಾಗುವ ರಸ್ತೆಗೆ ರೂ. ೫ ಲಕ್ಷ ಹಾಗೂ ಬಿದ್ದಂಡ ಅಚ್ಚಯ್ಯನ ರಸ್ತೆಗೆ ರೂ. ೫ ಲಕ್ಷ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಕಂಡಕರೆ-ಕೂಡ್ಲೂರು ರಸ್ತೆಗೆ ರೂ. ೧೫ ಲಕ್ಷ ವೆಚ್ಚದ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಯಿಂದ ಸ್ಥಳೀಯರ ಸಂಚಾರಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.