ಮಡಿಕೇರಿ, ಸೆ. ೧೨: ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವ ಒಕ್ಕೂಟ ಮಡಿಕೇರಿ ಹಾಗೂ ಕಬಡಕೇರಿ ಸ್ಪೋರ್ಟ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ೫೦ನೇ ವರ್ಷದ ಕೈಲ್‌ಪೊಳ್ದ್ ಹಬ್ಬದ ಕ್ರೀಡಾಕೂಟ ಸಂಘದ ಮೈದಾನದಲ್ಲಿ ಜರುಗಿತು. ಹೊದ್ದೂರು ಕಾಫಿ ಬೆಳೆಗಾರ ಮಂಡೇಪAಡ ರಮೇಶ್ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಹಬ್ಬದ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ವಿವಿಧ ವಿಭಾಗದ ಓಟದ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು, ಭಾರದ ಕಲ್ಲಿನ ಎಸೆತ, ಕಾಳು ಹೆಕ್ಕುವುದು, ಹಗ್ಗಜಗ್ಗಾಟ, ಮೆರಾಥಾನ್, ಬಾಂಬ್ ಇನ್ ದಿ ಸಿಟಿ, ಸಾಂಪ್ರದಾಯಿಕ ವಾಲಗ ಕುಣಿತ, ೨ ಕಾಲು ಕಟ್ಟಿ ಕುಪ್ಪಳಿಸುವುದು ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆದವು. ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಸೇರಿದಂತೆ ಸ್ಥಳೀಯ ಕುಟುಂಬದ ಸದಸ್ಯರುಗಳು ಪಾಲ್ಗೊಂಡು ಸಂಭ್ರಮಿಸಿದರು. ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚೆಟ್ಟಿಮಾಡ ಬಾಲಕೃಷ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹೊದ್ದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಜಿಲ್ಲೆಯಲ್ಲಿ ಕೈಲ್‌ಪೊಳ್ದ್, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಹಬ್ಬ ಪ್ರಮುಖ ಹಬ್ಬಗಳಾಗಿದ್ದು, ಇಂತಹ ಹಬ್ಬಗಳು ತನ್ನದೇ ಆದ ಹಿನ್ನೆಲೆ, ಸಂಸ್ಕೃತಿ - ಸಂಪ್ರದಾಯ, ಪದ್ಧತಿ - ಪರಂಪರೆಗಳನ್ನು ಒಳಗೊಂಡಿದ್ದು, ಗ್ರಾಮಸ್ಥರಲ್ಲಿ ಸಾಮರಸ್ಯ - ಒಗ್ಗಟ್ಟನ್ನು ಬೆಸೆಯುವುದರಲ್ಲಿ ಪ್ರಮುಖ ಕಾರಣವಾಗಲಿದೆ ಎಂದರು. ಅದರಲ್ಲೂ ವಿಶೇಷವಾಗಿ ರೈತರು ಕೃಷಿ ಭೂಮಿಯೊಂದಿಗೆ ಬೆರೆಯುವುದರ ಮೂಲಕ ವರ್ಷದ ಭತ್ತದ ಬೆಳೆಗೆ ಕಠಿಣ ಪರಿಶ್ರಮದೊಂದಿಗೆ ಕೆಲಸ ನಿರ್ವಹಿಸಿ ಬಳಲಿರುವ ಶರೀರಕ್ಕೆ ಒಂದಿಷ್ಟು ವಿಶ್ರಾಂತಿ ನೀಡುವಲ್ಲಿ ಕೈಲ್‌ಪೊಳ್ದ್ ಹಬ್ಬ ಹಾಗೂ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು. ಸಮಾರಂಭದಲ್ಲಿ ಮೈಸೂರು ಇನ್ಫೋಸಿಸ್ ಉದ್ಯೋಗಿ ಮೇಕಂಡ ಬಿ. ಕಾವೇರಪ್ಪ, ದವಸ ಭಂಡಾರದ ಅಧ್ಯಕ್ಷೆ ತೆಕ್ಕಡೆ ಎಲ್. ರಾಜೇಶ್ವರಿ, ಉದ್ಯಮಿ ಬಿ.ಎಂ. ಇಬ್ರಾಹಿಂ, ಕಬಡಕೇರಿ ಅಂಗನವಾಡಿ ಕಾರ್ಯಕರ್ತೆ ಜಿ. ಪ್ರೇಮ, ಮೇಕಂಡ ಸುನಿಲ್ ಮಾದಪ್ಪ, ಗಣೇಶ್, ಪೆಮ್ಮಯ್ಯ, ಕುಶಾಲಪ್ಪ, ಬೆಳ್ಯಪ್ಪ, ಚೆಟ್ಟಿಮಾಡ ಅಭಿಷೇಕ್, ದಿವಿ, ಪುರುಷೋತ್ತಮ, ಬಶೀರ್, ಉಮೇಶ್, ಬಿ. ದೇವಪ್ಪ ಮುಂತಾದವರು ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕಿ ಚೆಟ್ಟಿಮಾಡ ದಮಯಂತಿ ಗೋಪಾಲ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೇಕಂಡ ಸರಸು ಪಾರ್ವತಿ ಪ್ರಾರ್ಥಿಸಿ, ಸದಸ್ಯ ಚೆಟ್ಟಿಮಾಡ ಜಿ. ಲೋಕೇಶ್ ಸ್ವಾಗತಿಸಿದರು. ಕೂಡಂಡ ಸಾಬ ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಮೇಕಂಡ ದೊರೆ ತಮ್ಮಯ್ಯ ವಂದಿಸಿದರು.