ಸೋಮವಾರಪೇಟೆ, ಸೆ. ೧೨: ಕಳೆದ ತಾ. ೪ ರಂದು ಸೋಮವಾರಪೇಟೆ ಪಟ್ಟಣದ ಗಾಂಧಿ ಸರ್ಕಲ್ ಬಳಿ ಇರುವ ಎಸ್‌ಬಿಐ ಬ್ಯಾಂಕ್‌ನ ಎ.ಟಿ.ಎಂ ಕಳ್ಳತನ ಮಾಡಲು ಪ್ರಯತ್ನಿಸಿದ ಕೃತ್ಯಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ಈರ್ವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ ತಾ.೪ ರಂದು ರಾತ್ರಿ ೨ ಗಂಟೆ ಸುಮಾರಿಗೆ ಎ.ಟಿ.ಎಂ. ಪ್ರವೇಶಿಸಿದ ಕಳ್ಳರು, ಯಂತ್ರದ ಮುಂಭಾಗವನ್ನು ಕಬ್ಬಿಣದ ಸಲಾಕೆಯಿಂದ ತೆರೆದು, ಒಳಗಿರುವ ಹಣವನ್ನು ದರೋಡೆ ಮಾಡಲು ಪ್ರಯತ್ನಿಸಿದ್ದರು. ಈ ಕೃತ್ಯವು ಎ.ಟಿ.ಎಂ.ನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮರುದಿನ ವಿಷಯ ತಿಳಿದ ಬ್ಯಾಂಕ್ ವ್ಯವಸ್ಥಾಪಕಿ ಸುಮೇಶ್ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾದ ಕುಶಾಲನಗರದ ಅಕ್ಕಿಮಂಟಿ ನಿವಾಸಿ, ಮಂಜುನಾಥ್ ಅವರ ಪುತ್ರ, ಸಿ.ಎಂ.ಎಸ್. ಸರ್ವಿಸ್ ನಲ್ಲಿ ಕೆಲಸ ಮಾಡಿಕೊಂಡಿರುವ ಎಂ. ಪವನ್‌ಕುಮಾರ್, ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸರ್ಕಲ್ ನಿವಾಸಿ ಪ್ರವೀಣ್ ಎಂಬವರ ಪುತ್ರ, ಸೇಲ್ಸ್ ಮೆನ್ ಆಗಿರುವ ಲವಿನ್ ಸೋಮಣ್ಣ ಅವರುಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಎಂ. ಮುದ್ದು ಮಾದೇವ, ಪೊಲೀಸ್ ಉಪ ನಿರೀಕ್ಷಕಿ ಯು. ಖತೀಜಾ, ಮುಖ್ಯ ಪೇದೆ ಕೆ.ಎಸ್. ಸುಧೀಶ್ ಕುಮಾರ್, ಸಿಬ್ಬಂದಿ ಅರುಣ್‌ಕುಮಾರ್ ಅವರುಗಳು ಭಾಗಿಯಾಗಿದ್ದರು. ಆರೋಪಿಗಳು ಕೃತ್ಯ ಎಸಗುವ ಸಂದರ್ಭ ಚಹರೆ ತಿಳಿಯದಂತೆ ಮುಸುಕು ಧರಿಸಿದ್ದರಿಂದ ಪ್ರಕರಣ ಭೇದಿಸಲು ಪೊಲೀಸರಿಗೆ ಸವಾಲಾಗಿತ್ತು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿರುವ ಸಿ.ಸಿ. ಕ್ಯಾಮೆರಾಗಳ ಪರಿಶೀಲನೆ, ವಾಹನದ ಸಂಚಾರಗಳನ್ನು ಪರಿಶೀಲಿಸಿ ಅಂತಿಮವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದಲ್ಲಿ ಬಂದಿತನಾಗಿರುವ ಪವನ್ ಕುಮಾರ್, ಕೊಡ್ಲಿಪೇಟೆ ಹಾಗೂ ಸೋಮವಾರಪೇಟೆಯ ಕೆಲ ಎಟಿಎಂಗಳಿಗೆ ಹಣ ತುಂಬುವ ಸಿ.ಎಂ.ಎಸ್. ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದು, ಈತನೇ ಎ.ಟಿ.ಎಂ.ದರೋಡೆಗೆ ಮುಂದಾಗಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.