ಕುಶಾಲನಗರ, ಸೆ. ೧೨: ಕುಶಾಲನಗರ ತಾಲೂಕು ತಹಶೀಲ್ದಾರ್ ಹುದ್ದೆಗೆ ಇಬ್ಬರು ತಹಶೀಲ್ದಾರ್ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿರುವ ಪ್ರಸಂಗ ವರದಿಯಾಗಿದೆ.
ಕಳೆದ ಮೇ ಅಂತ್ಯದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಅವರು ಸೇವೆಯಿಂದ ನಿವೃತ್ತರಾಗಿದ್ದು ಪ್ರಸಕ್ತ ಪ್ರಬಾರ ತಹಶೀಲ್ದಾರ್ ಆಗಿ ಸೋಮವಾರಪೇಟೆಯ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರನ್ನು ನಿಯೋಜಿಸಲಾಗಿದೆ. ಜೂನ್ ತಿಂಗಳಲ್ಲಿ ಕಂದಾಯ ಇಲಾಖೆ ಮೂಲಕ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ರಮೇಶ್ ಬಾಬು ಎಂಬವರನ್ನು ಕುಶಾಲನಗರ ತಾಲೂಕು ತಹಶೀಲ್ದಾರ್ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಎಸ್ಐಆರ್ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಮೇಶ್ ಬಾಬು ಅವರ ವರ್ಗಾವಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈ ನಡುವೆ ಕಂದಾಯ ಇಲಾಖೆ ಇನ್ನೊಬ್ಬರು ತಹಶೀಲ್ದಾರ್ ಅವರನ್ನು ಕುಶಾಲನಗರ ತಾಲೂಕಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಹಿಂತಿರುಗಿರುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ದೊರಕಿದೆ. ಕಳೆದ ಮೂರು ತಿಂಗಳಿAದ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಕುಶಾಲನಗರ ತಾಲೂಕು ಪ್ರಬಾರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ಸಿಂಚು