ತಿತಿಮತಿ, ಸೆ. ೧೨; ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಹೊಂದಿರುವ ಕೊಡಗಿನ ಚಿಕ್ಕ ಹಳ್ಳಿಯಾದ ತಿತಿಮತಿ ವ್ಯಾಪ್ತಿಗೆ ಒಳಪಟ್ಟ ಕರಡಿಕೊಪ್ಪ ಗ್ರಾಮದ ರಸ್ತೆ ಹದಗೆಟ್ಟಿದ್ದು, ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿ ರಸ್ತೆಯೋ? ಕೆರೆಯೋ? ಎಂಬAತಾಗಿದೆ. ಪಾದಚಾರಿಗಳು, ವಾಹನ ಸವಾರರು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ.

ರಸ್ತೆಗೆ ಡಾಂಬರು ಹಾಕಿದ್ದರೂ ಗುಂಡಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಮಳೆ ಬಂದ ಸನ್ನಿವೇಶಗಳಲ್ಲಂತೂ ಗುಂಡಿಯಲ್ಲಿ ನೀರು ತುಂಬಿಕೊAಡು ನಡೆದಾಡಲೂ ಸ್ಥಳವಿಲ್ಲದೆ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಾಹನ ಚಲಾಯಿಸಲು ಸವಾರರಿಗೂ ಗುಂಡಿ ಕಾಣದೆ ಅಪಘಾತ ಸಂಭವಿಸುವ ವಾತಾವರಣ ಸೃಷ್ಟಿಯಾಗಿದೆ.

ಶಾಲಾ - ಕಾಲೇಜು ವಿದ್ಯಾರ್ಥಿಗಳು ಕೂಡಾ ತೊಂದರೆ ಅನುಭವಿಸುತ್ತಿರುವದು ಶೋಚನೀಯ ಸಂಗತಿ. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುವಂತಹ ಸನ್ನಿವೇಶ ತಲೆದೋರಿದೆ. ರಸ್ತೆಯ ಗುಂಡಿಗಳಿAದ ವಾಹನಗಳಿಗೆ ಹಾನಿಯಾಗುತ್ತಿದ್ದು, ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಮೊದಲೇ ರಸ್ತೆ ದುರಸ್ತಿ ಕಾಮಗಾರಿ ನಡೆದಿತ್ತಾದರೂ ಮತ್ತೆ ರಸ್ತೆಯ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಕಾರಣ ಕಳಪೆ ಕಾಮಗಾರಿ ಎಂದರೆ ತಪ್ಪಾಗಲಾರದು. ಇದೇ ರಸ್ತೆಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿಗೆ ಸಂಬAಧಪಟ್ಟ ಪ್ರತಿನಿಧಿಗಳು ಓಡಾಡುವ ಸಂದರ್ಭ ರಸ್ತೆಯ ದುಸ್ಥಿತಿ ಕಣ್ಣಿಗೆ ಕಂಡರೂ ಅದನ್ನು ಪರಿಹರಿಸಲು ಮುಂದಾಗದಿರುವುದು ಬೇಸರದ ಸಂಗತಿ.

ರಸ್ತೆಯ ದುರಸ್ತಿ ಕಾಮಗಾರಿಯನ್ನು ಆದಷ್ಟು ಬೇಗ ಕೈಗೊಂಡು ಗುಂಡಿಗಳನ್ನು ಮುಚ್ಚಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜನರು ಒತ್ತಾಯಿಸುತ್ತಿದ್ದಾರೆ. ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸ್ಥಿತಿ ಪರಿಶೀಲಿಸಿ ಶೀಘ್ರದಲ್ಲಿ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

- ಪೂರ್ಣಿಮಾ ಚಾರ್ಲಿ, ತಿತಿಮತಿ