ಮೈಸೂರು, ಸೆ. ೧೧: ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಮೌನದ ಮಹಾ ಪಯಣ’ ಹಾಗೂ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿಗಳನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಲಾಯಿತು. ಆ ಮೂಲಕ ನಾಡಿನ ಹೆಮ್ಮೆಯ ದಸರಾ ಆನೆ ಅಭಿಮನ್ಯುವಿಗೆ ಅಕ್ಷರ ತೇರಿನ ಮೂಲಕ ಗೌರವಪೂರ್ವಕ ಬೀಳ್ಕೊಡುಗೆ ನೀಡಲಾಯಿತು.
ಮೈಸೂರು ಕಲ್ಚರಲ್ ಅಸೋಸಿಯೇಷನ್ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವತಿಯಿಂದ ನಗರದ ನಜರ್ಬಾದ್ನ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ. ಮಂಜುನಾಥ್ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಣಿಗಳ ನಡವಳಿಕೆ ಕುರಿತು ಬರೆಯುವುದು ಭಾವನಾತ್ಮಕ ಹಾಗೂ ಸುದೀರ್ಘ ಅಧ್ಯಯನದ ಅಗತ್ಯತೆ ಇದೆ. ವಿದೇಶಿ ಸ್ನೇಹಿತರೊಬ್ಬರು ಒಂದು ಪಕ್ಷಿಯ ವರ್ತನೆ ಕುರಿತು ೫೦ ವರ್ಷಗಳ ಕಾಲ ಅಧ್ಯಯನ ನಡೆಸಿದ್ದರೂ ಅದು ಪೂರ್ಣಗೊಳ್ಳಲಿಲ್ಲ. ಇಂತಹ ಗಂಭೀರ ವಿಚಾರಗಳನ್ನು ಒಳಗೊಂಡು ರಮೇಶ್ ಉತ್ತಪ್ಪ ಅವರು ಕೃತಿ ರಚಿಸಿರುವುದು ಶ್ಲಾಘನೀಯ ಎಂದರು.
ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಅಭಿಮನ್ಯುವಿನ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪ್ರಾಣಿಯನ್ನು ಸಾಹಿತ್ಯದ ಮೂಲಕ ಗೌರವಿಸುವ ವಿಶ್ವದ ವಿಶಿಷ್ಟ ಪ್ರಯತ್ನಗಳಲ್ಲಿ ಇದೂ ಒಂದಾಗಿದೆ. ಪ್ರಾಣಿಗಳೊಂದಿಗೆ ಸಂಯಮದಿAದ ವರ್ತಿಸಬೇಕು. ಅವುಗಳೊಂದಿಗೆ ಮೌನ ಸಂವಹನ ನಡೆಸುತ್ತಾ, ದೂರದಿಂದಲೇ ಅವುಗಳ ಸೌಖ್ಯವನ್ನು ಬಯಸಬೇಕು ಎಂಬ ಸಂದೇಶವನ್ನು ಕೃತಿಯ ಮೂಲಕ ನೀಡಲಾಗಿದೆ ಎಂದರು.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಮಾತನಾಡಿ, ಅಭಿಮನ್ಯುವಿನ ಕುರಿತು ಪುಸ್ತಕ ಪ್ರಕಟವಾಗುತ್ತಿದೆ ಎಂದಾಗ ಅದರ ಹುಟ್ಟು, ಬೆಳವಣಿಗೆ ಹಾಗೂ ಜೀವನದ ವಿವರಗಳಿರಬಹುದು ಎಂದುಕೊAಡಿದ್ದೆ. ಆದರೆ ಕೃತಿ ಓದಿದಾಗ ಇದೊಂದು ಭಾವನಾತ್ಮಕ ಕವಿತೆಗಳ ಸಮಾಗಮ ಎಂಬುದು ತಿಳಿಯಿತು ಎಂದರು.
ಕಾರ್ಯಾಚರಣೆಗಳ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ನುಗ್ಗಿ ಹಾವಳಿ ಮಾಡುವ ಆನೆಗಳನ್ನು ತಹಬದಿಗೆ ತರುವಲ್ಲಿ ಅಭಿಮನ್ಯು ವೀರಾವೇಶದಿಂದ ಕಾರ್ಯನಿರ್ವಹಿಸುತ್ತಾನೆ. ಅದೇ ಆನೆ ದಸರಾ ಮಹೋತ್ಸವಕ್ಕೆ ಬಂದಾಗ ಲಕ್ಷಾಂತರ ಜನರ ನಡುವೆ ಅತ್ಯಂತ ಸಂಯಮದಿAದ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತದೆ. ಹೀಗೆ ಎರಡು ವಿಭಿನ್ನ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಗುಣ ಹೊಂದಿರುವ ಇಂತಹ ಆನೆಯನ್ನು ತಾವು ಕಂಡಿಲ್ಲ ಎಂದು ಸ್ಮರಿಸಿದರು.
ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್ ಹಾಗೂ ಕಾರ್ಯದರ್ಶಿ ಮಹದೇವ್ ಅವರು ಅಭಿಮನ್ಯುವಿನ ಮಾವುತ ವಸಂತ ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾವುತ ವಸಂತ, ಅಭಿಮನ್ಯು ಕುರಿತು ರಮೇಶ್ ಉತ್ತಪ್ಪ ಅವರು ಕೃತಿ ರಚಿಸಿರುವುದು ಸಂತಸದ ವಿಚಾರ. ಆನೆಗಳನ್ನು ಪಳಗಿಸುವುದು ಸುಲಭದ ಕೆಲಸವಲ್ಲ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಕೃತಿಗಳ ಕರ್ತೃ ಐತಿಚಂಡ ರಮೇಶ್ ಉತ್ತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.