ಪೊನ್ನಂಪೇಟೆ, ಸೆ. ೧೦: ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದ ಗುಂಡತ್‌ಕೊಲ್ಲಿ ಪೈಸಾರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ, ವಸತಿ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಜಗದೀಶ್ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್. ಗೋವಿಂದಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರು ಪೊನ್ನಂಪೇಟೆ ಕಂದಾಯ ಇಲಾಖೆ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮತ್ತೂರು ಗ್ರಾಮದ ಗುಂಡತ್‌ಕೊಲ್ಲಿ ಪೈಸಾರಿ ಸರ್ವೆ ನಂ. ೭೪/೧ ರಲ್ಲಿರುವ ಸುಮಾರು ೩ ಎಕರೆ ೨೦ ಸೆಂಟ್ ಸರ್ಕಾರಿ ಜಾಗದಲ್ಲಿ ೨೫ಕ್ಕೂ ಅಧಿಕ ಕುಟುಂಬಗಳು ಕಳೆದ ೩೦-೪೦ ವರ್ಷಗಳಿಂದ ವಾಸಿಸುತ್ತಿದ್ದು, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಹಾಗೂ ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಗದೀಶ್ ಮಾತನಾಡಿ, ಹಲವು ವರ್ಷಗಳಿಂದ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ನಂತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಸರ್ವೆ ಮಾಡಿ, ೫೬ ಸೆಂಟ್ ರಾಜಕಾಲುವೆ ಬಿಟ್ಟು ಉಳಿದ ಜಾಗವನ್ನು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಹಂಚಿಕೆ ಮಾಡಿ, ಮೂಲಸೌಕರ್ಯದೊಂದಿಗೆ ವಾಸಯೋಗ್ಯ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಟಿ.ಎನ್. ಗೋವಿಂದಪ್ಪ ಮಾತನಾಡಿ, ಸರ್ಕಾರಿ ಪೈಸಾರಿ ಜಾಗದಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಬೇಡಿಕೆ ಈಡೇರದಿದ್ದರೆ ಜಿಲ್ಲೆಯಾದ್ಯಂತ ಪೈಸಾರಿ ಪ್ರದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳನ್ನು ಸಂಘಟಿಸಿ, ತಾಲೂಕು ಕಚೇರಿ ಹಾಗೂ ಸರ್ವೆ ಕಚೇರಿ ಎದುರು ಧರಣಿ, ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರದ ಆದೇಶದಂತೆ ಗುಂಡತ್‌ಕೊಲ್ಲಿ ಸರ್ವೆ ನಂ. ೭೪/೧ ರ ಜಾಗದ ಸರ್ವೆ ನಡೆಸಲು ಭೂ ಮಾಪನ ಇಲಾಖೆ ಮುಂದಾದಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಭೂ ಮಾಪನ ಅಧಿಕಾರಿ ಕುಚೇಲ ಮಾತನಾಡಿ, ರಾಜಕಾಲುವೆ ಸರ್ವೆ ಕುರಿತು ಈಗಾಗಲೇ ಸ್ಥಳೀಯರಿಗೆ ನೋಟಿಸ್ ನೀಡಲಾಗಿತ್ತು. ಸರ್ವೆಗೆ ತೆರಳಿದಾಗ ಸ್ಥಳೀಯರು ರಾಜಕಾಲುವೆಯನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಎಂದು ಮನವಿ ಮಾಡಿದರು. ಹೀಗಾಗಿ ಸರ್ವೆ ಸ್ಥಗಿತಗೊಳಿಸಲಾಗಿದೆ ಎಂದರು. ಸ್ಥಳೀಯ ನಿವಾಸಿ ಕಾಡ್ಯಮಾಡ ಪೂಣಚ್ಚ ಮಾತನಾಡಿ, ಪರಿಶಿಷ್ಟ ಪಂಗಡದವರಿಗೆ ನಿವೇಶನ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ರಾಜಕಾಲುವೆಯಲ್ಲಿ ಟೆಂಟ್ ಹಾಕಲು ಒಪ್ಪುವುದಿಲ್ಲ. ಸರ್ಕಾರಿ ಸರ್ವೆ ನಡೆಸಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ, ಕಾಲುವೆಯನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಸದಸ್ಯ ರಾಜು, ಸ್ಥಳೀಯರಾದ ಚೆಲುವ, ರಾಜು ಸೇರಿದಂತೆ ಪರಿಶಿಷ್ಟ ಪಂಗಡದ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು.