ಸೋಮವಾರಪೇಟೆ, ಸೆ. ೧೦: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಆದಿವಾಸಿ ದಲಿತರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರದ ಭರವಸೆ ನೀಡಿದರು.

ಸಭೆಯಲ್ಲಿ ಭಾಗಿಯಾಗಿದ್ದ ಆದಿವಾಸಿ ದಲಿತ ಸಮುದಾಯದವರು ತಮಗೆ ವಸತಿ, ನಿವೇಶನ, ಹಕ್ಕು ಪತ್ರ, ಭೂಮಿ ಹಕ್ಕು, ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ ಸೌಲಭ್ಯ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ತಮ್ಮ ಅಹವಾಲುಗಳನ್ನು ಶಾಸಕರೆದುರು ತೆರೆದಿಟ್ಟರು.

ಸಮಾಜದ ಕಟ್ಟಕಡೆಯಲ್ಲಿರುವ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಪ್ರಮುಖ ಆದ್ಯತೆಯಾಗಿದೆ. ಪ್ರತಿಯೊಂದು ಅಹವಾಲು ಹಾಗೂ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದು ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಹಕ್ಕುಗಳು ತಲುಪುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕರು ತಿಳಿಸಿದರು.

ಇದರೊಂದಿಗೆ ನಿವೇಶನ ರಹಿತರು, ಲೈನ್‌ಮನೆಗಳಲ್ಲಿ ವಾಸವಿರುವ ಮಂದಿಗೆ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಈ ವಿಷಯದಲ್ಲಿ ಕೊಂಚ ತಾಳ್ಮೆ ಅಗತ್ಯ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ೫೦ ಸಾವಿರ ನಿವೇಶನಗಳನ್ನು ಗುರುತಿಸಿ ವಸತಿ ರಹಿತರಿಗೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದು, ಈ ಬಗೆಗಿನ ಕಾರ್ಯಯೋಜನೆ ಸಿದ್ಧಗೊಳ್ಳುತ್ತಿದೆ. ಪ್ರತಿ ಪಂಚಾಯಿತಿಯಲ್ಲೂ ನಿವೇಶನ ರಹಿತರ ಪಟ್ಟಿಯಿದ್ದು, ಆದ್ಯತೆಯ ಮೇರೆಗೆ ನಿವೇಶನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ಅಕ್ರಮ ಸಕ್ರಮ ಸಮಿತಿಯ ಬಿ.ಬಿ. ಸತೀಶ್, ಜೆ.ಎಲ್. ಜನಾರ್ದನ್, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಇತರರು ಇದ್ದರು.