ವೀರಾಜಪೇಟೆ ಕೊಡವ ಸಮಾಜ

ಮಡಿಕೇರಿ: ಕೊಡವರು ತಮ್ಮ ಅಸ್ತಿತ್ವ, ಗುರುತು, ಸಂಸ್ಕೃತಿ, ಭೂಮಿ, ಭಾಷೆ ಅಥವಾ ಸಾಂವಿಧಾನಿಕ ಹಕ್ಕುಗಳ ಕುರಿತು ಧ್ವನಿ ಎತ್ತಲು ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ ಎಂದು ವೀರಾಜಪೇಟೆ ಕೊಡವ ಸಮಾಜ ಹೇಳಿದೆ.

ಇದು ಯಾರ ಮೇಲಿನ ದ್ವೇಷವೂ ಅಲ್ಲ. ಯಾರ ವಿರುದ್ಧದ ಸಂಘರ್ಷವೂ ಅಲ್ಲ. ಇದು ಭಾರತೀಯ ಸಂವಿಧಾನ ನಮಗೆ ನೀಡಿರುವ ಪ್ರಜಾಪ್ರಭುತ್ವದ ಹಕ್ಕಿನ ಸದುಪಯೋಗ ಎಂದಿರುವ ಅಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ ಹಾಗೂ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಭಾರತೀಯ ಸಂವಿಧಾನವೂ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಮತ್ತು ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಶಾಂತಿಯುತವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವ ಹಕ್ಕನ್ನು ನೀಡಿದೆ ಎಂದಿದ್ದಾರೆ.

ಒAದು ಸಮುದಾಯದ ಬೇಡಿಕೆಯನ್ನು ಮತ್ತೊಂದು ಸಮುದಾಯವು ಒಪ್ಪುವುದಿಲ್ಲವೆಂದರೆ, ಆ ಬೇಡಿಕೆ ಕೇಳುವ ಹಕ್ಕೇ ಕಳೆದು ಹೋಗುವುದಿಲ್ಲ. ಬೇಡಿಕೆ ಇಡುವ ಹಕ್ಕು ನಮ್ಮದು. ಆದರೆ, ಸಾಂವಿಧಾನಿಕ ಮಾನ್ಯತೆಯನ್ನು ನಿರ್ಧರಿಸುವುದು ಕಾನೂನು ಮತ್ತು ಸಂವಿಧಾನ ಯಾವುದೇ ಸಮುದಾಯವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೊಡಗಿನಲ್ಲಿ ವಾಸಿಸುವ ಪ್ರತಿಯೊಂದು ಸಮುದಾಯಕ್ಕೂ ಸಮಾನ ನಾಗರಿಕ ಹಕ್ಕುಗಳಿವೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ಇತರರ ಹಕ್ಕುಗಳನ್ನು ಗೌರವಿಸುವುದು ಎಂದರೆ ನಮ್ಮ ಹಕ್ಕುಗಳನ್ನು ತ್ಯಜಿಸುವುದಲ್ಲ ಎಂದಿರುವ ಕೊಡವ ಸಮಾಜ, ನಮ್ಮ ಹಕ್ಕುಗಳನ್ನು ನಿರ್ಧರಿಸುವುದು ನೀವಲ್ಲ ಭಾರತದ ಪ್ರಜಾಪ್ರಭುತ್ವ ಎಂದು ಗೌಡ ಸಮಾಜ ಒಕ್ಕೂಟಕ್ಕೆ ಹೇಳಿದ್ದಾರೆ.