ಚಂದ್ರಮೋಹನ್ ಎಂ.ಎನ್.
ಕುಶಾಲನಗರ, ಸೆ. ೯: ಕುಶಾಲನಗರದಲ್ಲಿ ಕಳೆದ ಸುಮಾರು ೩೦ ವರ್ಷಗಳ ಹಿಂದೆ ಪ್ರತಿಷ್ಠಿತ ಉದ್ಯಮಿಯ ಸೋಗಿನಲ್ಲಿ ಬಂದು ಕೆಲವೇ ಸಮಯ ಐಷಾರಾಮಿ ಜೀವನ ಸಾಗಿಸಿ ಬ್ಯಾಂಕ್ ಸೇರಿದಂತೆ ಸ್ಥಳೀಯರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಪರಾರಿಯಾಗಿ ತಲೆಮರೆಸಿಕೊಂಡು ನಂತರ ಕೂಡ ವಂಚನೆ ಹಾದಿಯಲ್ಲಿ ಮುಂದುವರಿದು ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಮೂಲಕ ಪೊಲೀಸರು ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ರಾಹುಲ್ ಪೀಟರ್ ಆಲಿಯಾಸ್ ಸ್ಯಾಂ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ ಅಲಿಯಾಸ್ ಆಂಟನಿ ಫ್ರಾನ್ಸಿಸ್ ಇದೀಗ ಮಂಗಳೂರು ಪೊಲೀಸರ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾನೆ.
೧೯೯೭ರಲ್ಲಿ ಕುಶಾಲನಗರಕ್ಕೆ ಬಂದ ರಾಹುಲ್ ಪೀಟರ್ ತಾನೊಬ್ಬ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಉದ್ಯಮಿ ಎಂದು ಬಿಂಬಿಸಿಕೊAಡು ಸ್ಥಳೀಯರ ಗೆಳೆತನ ಬೆಳೆಸಿ ಲಕ್ಷಗಟ್ಟಲೆ ಹಣ ಸಂಪಾದಿಸಿ ನಂತರ ಪರಾರಿಯಾಗಿದ್ದ ಇದೀಗ ಕುಶಾಲನಗರದ ಜನತೆ ಇದು ಕೇವಲ ನೆನಪಾಗಿ ಉಳಿದಿದ್ದು ಆತನಿಂದ ವಂಚನೆಗೆ ಒಳಗಾದ ಬ್ಯಾಂಕ್ ಅಧಿಕಾರಿಯೊಬ್ಬರು ತನ್ನ ಕೆಲಸ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಪ್ರಸಂಗವೂ ನಡೆದಿತ್ತು.
ಇನ್ನೊಂದೆಡೆ ಕುಶಾಲನಗರದ ಉದ್ಯಮಿ ಓರ್ವ ಆತನ ಬ್ಯಾಂಕ್ ವಹಿವಾಟಿಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಹತ್ತಾರು ವರ್ಷ ನ್ಯಾಯಾಲಯಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ಕೂಡ ಸೃಷ್ಟಿಯಾಗಿತ್ತು. ಕುಶಾಲನಗರದಲ್ಲಿ ಈ ಅವಧಿಯಲ್ಲಿ ಪ್ರತಿಷ್ಠಿತ ಸೇವಾ ಸಂಸ್ಥೆಯೊAದರ ಸದಸ್ಯತನ ಗಳಿಸುವಲ್ಲಿ ಕೂಡ ಈತ ಯಶಸ್ವಿಯಾಗಿದ್ದ.
ಕುಶಾಲನಗರದ ಇಂದಿರಾ ಬಡಾವಣೆಯಲ್ಲಿ ಖರೀದಿಸಿದ ಮನೆಯಲ್ಲಿ ತನ್ನ ಪತ್ನಿ ಮಗುವೊಂದಿಗೆ ನೆಲೆಸಿದ್ದ ಈತ ಈ ಭಾಗದ ಜನರಿಗೆ ಒಬ್ಬ ವಿಶಿಷ್ಟ ವ್ಯಕ್ತಿಯಂತೆ ಭಾಸವಾಗುವಂತಿದ್ದ.. ನಂತರ ತಿಳಿದು ಬಂದಿದ್ದೇನೆAದರೆ ಈತನೊಂದಿಗೆ ನೆಲೆಸಿದ್ದ ಮಹಿಳೆ ಮತ್ತು ಮಗು ಈತನ ಕುಟುಂಬ ಸದಸ್ಯರು ಅಲ್ಲ ಅನ್ನುವ ವಿಚಾರ. ಅಲ್ಲಿಯೂ ಕೂಡ ಹಲವರ ಮನಸ್ಸನ್ನು ಸೆಳೆಯುವಂತೆ ಮಾಡಿದ್ದ ಈ ವ್ಯಕ್ತಿ. ಇಷ್ಟೆಲ್ಲದರ ನಡುವೆ ತಾನು ಖರೀದಿಸಿದ ಮನೆ ಮೇಲೆ ದೊಡ್ಡ ಪ್ರಮಾಣದ ಸಾಲವನ್ನು ಕೂಡ ಮಾಡುವಲ್ಲಿ ಯಶಸ್ವಿಯಾಗಿದ್ದ.
ಕುಶಾಲನಗರದಲ್ಲಿ ನೆಲೆಸಿದ್ದ ಸಂದರ್ಭ ಸ್ಥಳೀಯ ಗಣ್ಯರು, ಅಧಿಕಾರಿಗಳು ಉದ್ಯಮಿಗಳನ್ನು ತನ್ನ ಬುಟ್ಟಿಗೆ ಸೆಳೆಯುವಲ್ಲಿ ಆ ರಾಹುಲ್ ಪೀಟರ್ ಬಹುತೇಕ ಯಶಸ್ವಿಯಾಗಿದ್ದ.
ಉತ್ತರ ಭಾರತದ ಛತ್ತೀಸ್ಗಡ್‌ನಲ್ಲಿ ಸ್ವಲ್ಪಕಾಲ ನೆಲೆಸಿದ ಈ ವಂಚಕ ನಂತರ ಬಂದಿದ್ದೆ ಕುಶಾಲನಗರಕ್ಕೆ.
ತಾನೊಬ್ಬ ಪ್ರತಿಷ್ಠಿತ ಉದ್ಯಮಿ ಎಂದು ಬಿಂಬಿಸಿಕೊAಡು ಕೆಲವೇ ದಿನಗಳಲ್ಲಿ ಸ್ಥಳೀಯರ ಗೆಳೆತನ ಸಂಪಾದಿಸಿ ಬ್ಯಾಂಕ್ ಸೇರಿದಂತೆ ಹಲವರಿಗೆ ವಂಚನೆ ಮಾಡಿ ಪರಾರಿಯಾಗಿದ್ದ. ಇನ್ನೊಂದೆಡೆ ಸ್ಥಳೀಯ ಚರ್ಚ್ ಧರ್ಮ ಗುರುಗಳು ಹಾಗೂ ಭಕ್ತಾದಿಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವುದರಲ್ಲಿಯೂ ಈತ ಯಶಸ್ವಿಯಾಗಿದ್ದ. ಅದಕ್ಕೆ ಸಾಕ್ಷಿ ಎಂಬAತೆ ಮೈಸೂರು ರಸ್ತೆ ಬದಿಯಲ್ಲಿ ಸಂತ ಮೇರಿ ಅಮ್ಮನ ಗ್ರೋಟೋ ಒಂದನ್ನು ನಿರ್ಮಿಸಿ ತಾನೊಬ್ಬ ದೈವಭಕ್ತ ಎಂಬುದನ್ನು ಕೂಡ ನಂಬಿಸಿದ್ದ. ದಿನನಿತ್ಯ ಅಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದ ರಾಹುಲ್ ಪೀಟರ್. ಇತರರನ್ನು ಅಲ್ಲಿ ಭಕ್ತಿ ಮಾರ್ಗದಲ್ಲಿ ಸಂಧಿಸಿ ತನ್ನ ವಂಚ ಜಾಲವನ್ನು ವಿಸ್ತಾರ ಮಾಡಿಕೊಳ್ಳುತ್ತಿದ್ದ.
ಕುಶಾಲನಗರದಿಂದ ಕಾಲ್ಕಿತ್ತ ನಂತರ ಈತ ತನ್ನ ವಂಚನೆ ಜಾಲವನ್ನು ಮಾತ್ರ ಮುಂದುವರೆಸಿಕೊAಡು ನಂತರ ನೆರೆಯ ತಮಿಳುನಾಡು ಕೇರಳದಲ್ಲಿ ಕೋಟ್ಯಂತರ ವಂಚನೆ ಜಾಲದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
೨೦೧೯ ರಲ್ಲಿ ಮಂಗಳೂರಿನ ಲಾಡ್ಜ್ ಒಂದರಲ್ಲಿ ಈತ ತನ್ನ ಸಹಚರರೊಂದಿಗೆ ಸೇರಿ ತಾನು ನ್ಯಾಷನಲ್ ಕ್ರೆöÊಂ ಇನ್ವೆಸ್ಟಿಗೇಷನ್ ಬ್ಯುರೋ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಆಂಟನಿ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಮಾಹಿತಿ ಮೇರೆಗೆ ಲಾಡ್ಜ್ ಗೆ ಮಂಗಳೂರು ಪೊಲೀಸರು ದಾಳಿ ಮಾಡಿ ಈತನನ್ನು ವಶಕ್ಕೆ ಪಡೆದಿದ್ದರು.
ಈ ಸಂದರ್ಭ ರಿವಾಲ್ವರ್‌ಗಳು ಕೂಡ ಪತ್ತೆಯಾಗಿದ್ದವು. ೨೦೦೭ರಲ್ಲಿ ಈತನ ಮೇಲೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಆಗಿದ್ದ ಮಾಹಿತಿ ಲಭಿಸಿದ ಮಂಗಳೂರು ಪೊಲೀಸರು ಎಚ್ಚರಗೊಂಡು ಇವರನ್ನು ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು.
ಸುಮಾರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಇದ್ದ ರಾಹುಲ್ ಪೀಟರ್ ಅಲಿಯಾಸ್ ಆಂಟನಿ ಮತ್ತೆ ನಾಪತ್ತೆ ಆಗಿ ಕರ್ನಾಟಕ ತಮಿಳುನಾಡು ಮಹಾರಾಷ್ಟ್ರ ಉತ್ತರ ಪ್ರದೇಶ ಮತ್ತಿತರ ಕಡೆ ತನ್ನ ಕೈಚಳಕ ತೋರಿಸಿಕೊಂಡು ವಂಚನೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮೂಲಕ ಕೋಟಿಗಟ್ಟಲೆ ಹಣ ಸಂಪಾದಿಸಿಕೊAಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಆಂಟನಿಯ ವಂಚನೆ ಕಾರ್ಯಕ್ರಮ ಬಹಳ ಸರಳವಾಗಿದ್ದು ಬ್ಯಾಂಕ್ ಫ್ರಾಡ್, ತೆರಿಗೆ ಕದ್ದ ಆರೋಪ, ಹಣಕಾಸು ಮೋಸ ದಂತಹ ಕೇಸುಗಳನ್ನು ಹುಡುಕಿ ಅದರಲ್ಲಿ ಭಾಗಿಯಾದ ಸಿರಿವಂತರನ್ನು ತನಿಖೆ ಸಂಸ್ಥೆಯ ಅಧಿಕಾರಿಯ ಸೋಗಿನಲ್ಲಿ ಹೆದರಿಸಿ ಡೀಲ್ ಮೂಲಕ ಹಣ ಪಡೆದು ಕಣ್ಮರೆಯಾಗುವುದು.
ಈತ ೨೦೧೯ರಲ್ಲಿ ಈ ರೀತಿಯ ವಂಚನೆ ಜಾಲದಲ್ಲಿ ಈತನ ತಂಡ ಮಂಗಳೂರಿನಲ್ಲಿ ಬಾಚಿದ್ದು ಸುಮಾರು ೧.೧೩ ಕೋಟಿ ರೂಪಾಯಿ. ಇಷ್ಟೆಲ್ಲ ವಂಚನೆ ಮಾಡಿದ್ದರೂ ಈತ ಈ ೩೦ ವರ್ಷಗಳಲ್ಲಿ ಎರಡೇ ಬಾರಿ ಪೊಲೀಸರ ವಶಕ್ಕೆ ಸಿಕ್ಕಿದ್ದು. ೨೦೧೯ ಮತ್ತೆ ಇದೀಗ ಮೊನ್ನೆ ಸೆಪ್ಟೆಂಬರ್ ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈತನ ಬಗ್ಗೆ ಮಾಹಿತಿ ಸಂಗ್ರಹಿಸಿ ಈತನನ್ನು ಪತ್ತೆಹಚ್ಚಲು ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಿ ಇದೀಗ ಮಂಗಳೂರು ಸಿಸಿಬಿ ಪೊಲೀಸರು ಸಮೀಪದ ಕೇರಳ ಕಣ್ಣೂರು ಬಳಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ವಿಶೇಷ ಏನೆಂದರೆ ಈತನ ಬಂಧನದ ನಂತರ ಕೇರಳದಿಂದ ಕರ್ನಾಟಕ ಪೊಲೀಸ್ ಅಧಿಕಾರಿಗಳಿಗೆ ಸ್ವಾರಸ್ಯಕರ ಕರೆಗಳು ಬರುತ್ತಿದ್ದು ಈತ ಪ್ರಾಮಾಣಿಕ, ಸತ್ಯಸಂಧ ಎಂದು ಹೇಳುತ್ತಿದ್ದಾರಂತೆ. ಬಿಟ್ಟುಬಿಡಿ ಎಂದು ಪೊಲೀಸರಿಗೆ ಒತ್ತಡ ತರುತ್ತಿದ್ದಾರಂತೆ..
ಕರೆ ಮಾಡಿದವರು ಪ್ರಭಾವಿ ವ್ಯಕ್ತಿಗಳು ಎಂಬುದೇ ಇಲ್ಲಿ ವಿಶೇಷ ಎನ್ನುತ್ತಾರೆ ಮಂಗಳೂರು ಪೊಲೀಸರು. ಆದರೆ ಯಾವುದೇ ವಿಷಯಗಳಿಗೆ ಕಿಮ್ಮತ್ತು ನೀಡದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈತನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದು ೧೭ ಕೇಸುಗಳ ಸಂಬAಧ ಆಯಾಯ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ.
ಅದರಲ್ಲಿ ಕುಶಾಲನಗರದಲ್ಲಿ ೧೯೯೮ರಲ್ಲಿ ನಡೆದ ವಂಚನೆ ಪ್ರಕರಣ ಕೂಡ ಸೇರಿದೆ.
ವಂಚಕ ರಾಹುಲ್ ಪೀಟರ್ ಅಲಿಯಾಸ್ ಆಂಟನಿ ಕೇರಳದಲ್ಲಿ ಇದ್ದನೆಂಬ ಮಾಹಿತಿ ಮಂಗಳೂರು ಪೊಲೀಸರಿಗೆ ಲಭಿಸಿತ್ತು. ವಿಶೇಷ ಏನೆಂದರೆ ಈತ ಇದುವರೆಗೂ ಜನರನ್ನು ಯಾಮಾರಿಸಿದ್ದು ಖ್ಯಾತ ಉದ್ಯಮಿ ಅಥವಾ ಕೇಂದ್ರ ಸರ್ಕಾರದ ವಿವಿಧ ಏಜೆನ್ಸಿಗಳ ಹಿರಿಯ ಅಧಿಕಾರಿ ಎಂಬ ವಿಷಯದಲ್ಲಿ..
ಇತ್ತೀಚೆಗೆ ರಾಜಕಾರಣಿಯ ವೇಷ ಕೂಡ ಧರಿಸಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ. ಕೇರಳದಲ್ಲಿ ಕಾರ್ಯಕ್ರಮ ಒಂದರ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಈ ಸಂದರ್ಭ ಕಾರ್ಯಕ್ರಮದ ಫೋಟೋ ಮಂಗಳೂರು ಪೊಲೀಸರ ಕೈಗೆ ಸಿಗುತ್ತಲೇ ಕಾರ್ಯಾಚರಣೆ ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ. ಈತನ ನಾಮಧೇಯ ಸ್ಯಾಮ್ ಅಂತೋನಿ ಅನ್ನೋದು ಖಚಿತವಾದರೂ ಆತನ ಸ್ವಂತ ಹೆಸರು ಬಗ್ಗೆ ಇನ್ನೂ ಪೊಲೀಸರಿಗೆ ಅನುಮಾನ ಇದ್ದಂತಿದೆ. ಏಕೆಂದರೆ ಈತ ಅಷ್ಟೊಂದು ಹೆಸರನ್ನು ಬದಲಾಯಿಸಿಕೊಂಡಿದ್ದಾನೆ. ಒಂದೊAದು ರಾಜ್ಯದಲ್ಲಿ ಒಂದೊAದು ಹೆಸರು ಮಾತ್ರ ಅಲ್ಲ ಅದಕ್ಕೆ ಸೂಕ್ತ ದಾಖಲೆಗಳು ಕೂಡ ಈತನ ಜೊತೆಗೆ ಇದ್ದವು.
ಮಂಗಳೂರು ಸಿಸಿಬಿ ಪೊಲೀಸರ ಮಾಹಿತಿಯಂತೆ ಈತ ಪೀಟರ್, ೬೪ ವರ್ಷ ಪ್ರಾಯ ತಂದೆ ಹೆಸರು ತಂಬಿ ಪೀಟರ್, ಶಾಶ್ವತ ವಿಳಾಸ ಕೇರಳ ರಾಜ್ಯದ ಅಲಪ್ಪುಸ ಕೊಲ್ಲಂ ನಿವಾಸಿಯಾಗಿದ್ದಾನೆ.
ಪ್ರಸಕ್ತ ವಿಳಾಸ ಉತ್ತರಪ್ರದೇಶದ ಲಕ್ನೋ ಸರೋಜಿನಿ ನಗರ ದಾಖಲೆಗಳು ಪೊಲೀಸರಿಗೆ ತನಿಖೆಯಲ್ಲಿ ಲಭಿಸಿದೆ. ಕೇಂದ್ರ ಸರ್ಕಾರದ ಕ್ರೈಂ ಇನ್ವೆಸ್ಟಿಗೇಷನ್ ಬ್ಯೂರೋ ಡೈರೆಕ್ಟರ್, ಆಫೀಸರ್ ಅನ್ನುವ ದಾಖಲೆಗಳು ಕೂಡ ಪೊಲೀಸರಿಗೆ ಲಭಿಸಿವೆ.
ಮಂಗಳೂರು ಕದ್ರಿ ಪೊಲೀಸರು ಈತನ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದು ಈತನ ಮೇಲೆ ಇದುವರೆಗೆ ಒಟ್ಟು ೧೭ ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ಉತ್ತರ ಪ್ರದೇಶ ಮಹಾರಾಷ್ಟ್ರ ಛತ್ತೀಸ್ಗಡ್ ಬಿಹಾರ್ ಉತ್ತರ ಪ್ರದೇಶ ತಮಿಳುನಾಡು ಮಧ್ಯಪ್ರದೇಶ ರಾಜ್ಯಗಳಲ್ಲಿ ವಿವಿಧ ಠಾಣೆಗಳಲ್ಲಿ ಈತ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿವೆ.
ಕುಶಾಲನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಸಂಬAಧಿಸಿದAತೆ ೨೨೧/೧೯೯೮ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಆತನ ಮೇಲೆ ಮಂಗಳೂರು ಚಿಕ್ಕಬಳ್ಳಾಪುರ ಯಲಹಂಕ ಉಡುಪಿ ಕುಶಾಲನಗರ ಮಂಗಳೂರು ಕೊಣಾಜೆ ಉಲ್ಲಾಳ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.
ಈತನಿಗೆ ಒಟ್ಟು ೧೧ ಹೆಸರು ಇರುವ ದಾಖಲೆಗಳು ಲಭ್ಯವಾಗಿದ್ದು ಪ್ರಸಕ್ತ ಡ್ಯಾನಿ ತಾರಕನ್ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಎನ್ನುವುದು ಪೊಲೀಸರು ‘ಶಕ್ತಿ’ಗೆ ನೀಡಿದ ಮಾಹಿತಿ.
ಈತನ ಬಗ್ಗೆ ದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ. ಅಂತೋನಿ, ರಾಹುಲ್ ಪೀಟರ್, ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ರಿತು ರಿಚರ್ಡ್, ರಾಯ್ ಜಾಕ್ಸನ್, ರಾಬಿನ್ಸನ್ ಫ್ರಾನ್ಸಿಸ್ ಸೇರಿದಂತೆ ಮಂಗಳೂರು ಪೊಲೀಸರಿಗೆ ತಿಳಿದು ಬಂದಿರುವ ಈತನ ಹಲವು ನಾಮಧೇಯಗಳು..
ಸದ್ಯ ಈತ ಮಂಗಳೂರು ಜೈಲು ಪಾಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಅಸಾಧಾರಣ ನೈಪುಣ್ಯತೆ!
ರಾಹುಲ್ ಪೀಟರ್ ಅಲಿಯಾಸ್.. ಹಲವು ನಾಮಧೇಯಗಳನ್ನು ಹೊಂದಿದ್ದ ಈ ಅಸಾಧಾರಣ ನೈಪುಣ್ಯತೆ ಹೊಂದಿದ್ದ ಮಹಾವಂಚಕ ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಆತನಿಗೆ ಕಾನೂನಿನ ಅದ್ಭುತ ಜ್ಞಾನ ಇದೆ. ಆತನ ಹಿನ್ನೆಲೆ ತಿಳಿಯದೆ ವ್ಯಕ್ತಿ ಒಬ್ಬ ಆತನೊಂದಿಗೆ ಪರಿಚಯಿಸಿಕೊಂಡಾಗ ೧೦ ನಿಮಿಷ ಮಾತನಾಡಿದರೆ ಸಾಕು, ಈತ ಪ್ರಭಾವಿ ಉದ್ಯಮಿ, ಕೇಂದ್ರ ಸಂಸ್ಥೆಯ ಹಿರಿಯ ಅಧಿಕಾರಿ ಎಂದು ಸುಲಭವಾಗಿ ನಂಬುವAತಹ ಪರಿಸ್ಥಿತಿಯನ್ನು ಆತ ಸೃಷ್ಟಿ ಮಾಡುತ್ತಾನೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಕೇರಳದಲ್ಲಿ ಎಂಬಿಎ ಪದವಿ ಪಡೆದಿರುವ ಈತ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೆ ಪತ್ನಿ ಮಕ್ಕಳು ಆತನೊಂದಿಗೆ ವಾಸಿಸುತ್ತಿರಲಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ. ಆರ್ಥಿಕ ಸಂಕಷ್ಟಗಳಲ್ಲಿ ಸಿಲುಕುತ್ತಿದ್ದ ಶ್ರೀಮಂತ ಉದ್ಯಮಿಗಳನ್ನು ಸ್ವತಃ ಸಂಪರ್ಕಿಸುತ್ತಿದ್ದ.
ತನ್ನ ದುಬಾರಿ ಶುಲ್ಕ ಪಡೆದು ಅವರ ಕಾನೂನು ಸಮಸ್ಯೆಗಳನ್ನು ಪರಿಹರಿಸುವುದಾಗಿ ನಂಬಿಸುವ ಕಾಯಕ ಈತನದ್ದು. ತುಂಬಾ ಜನ ಈತನ ವಂಚನೆಯ ಬಲೆಗೆ ಬಿದ್ದರೂ ಪೊಲೀಸರಿಗೆ ಕೆಲವರು ದೂರು ನೀಡಲು ಮುಂದಾಗಲಿಲ್ಲ. ಕೇಂದ್ರ ತನಿಖಾದಳಕ್ಕೆ ಸಂಬAಧಿಸಿದ ವಿವಾದಗಳು ಈತನ ಕಿವಿಗೆ ಬಿದ್ದರೆ ಸಾಕು, ತಕ್ಷಣ ಈತ ಅಲ್ಲಿ ಹಾಜರಿರುತ್ತಿದ್ದ. ಈತನಿಗೆ ಇಂತಹ ಮಾಹಿತಿಗಳನ್ನು ನೀಡುವಂತಹ ಒಂದು ಜಾಲವೇ ಇದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರಬಂದAತಹ ಮಾಹಿತಿ.
ನಕಲಿ ಸಂದೇಶಗಳು ನಕಲಿ ದಾಳಿಯ ವೀಡಿಯೋಗಳು ಮತ್ತು ರಾಷ್ಟ್ರೀಯ ಅಥವಾ ಇತರ ಸಂಸ್ಥೆಗಳ ನಕಲಿ ಲೆಟರ್‌ಹೆಡ್‌ಗಳನ್ನು ಈತ ತಯಾರಿಸುತ್ತಿದ್ದ. ೨೦೧೮ ರಲ್ಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಚಿನ್ನದ ಸಾಗಣೆಯನ್ನು ವಶಪಡಿಸಿಕೊಂಡ ಬಳಿಕ ಮಂಗಳೂರಿನ ಉದ್ಯಮಿ ಅಬ್ದುಲ್ ಶರೀಫ್ ಅವರ ಸಹೋದರ ಸಿಯಾಬುದ್ದೀನ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿತ್ತು. ಈ ಮಹಾವಂಚಕನಿಗೆ ಹೇಗೋ ಈ ವಿಷಯ ತಿಳಿಯುತ್ತದೆ.
ಆತ ಒಂದು ತಂಡವನ್ನು ರಚಿಸಿಕೊಂಡು ತಾನು ಕೇಂದ್ರ ಇನ್ವೆಸ್ಟಿಗೇಷನ್ ತಂಡದ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಶರೀಫ್ ಅವರನ್ನು ಸಂಪರ್ಕಿಸಿ ಸಹೋದರನ ಮೇಲಿನ ಪ್ರಕರಣವನ್ನು ತಾನು ಮುಕ್ತಾಯಗೊಳಿಸುವುದಾಗಿ ಭರವಸೆ ನೀಡಿ ಇದೇ ಪ್ರಕರಣದಲ್ಲಿ ಶರೀಫ್ ಅವರಿಂದ ರಾಹುಲ್ ಪೀಟರ್ ವಿವಿಧ ಕಂತುಗಳಲ್ಲಿ ಒಂದು ಕೋಟಿಗೂ ಅಧಿಕ ಹಣವನ್ನು ಸುಲಿಗೆ ಮಾಡಿ ಮತ್ತೆ ನಾಪತ್ತೆಯಾಗುತ್ತಾನೆ. ಆ ಸಂದರ್ಭ ೨೦೧೯ ರಲ್ಲಿ ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ.
ಈ ಬಗ್ಗೆ ಬೆನ್ನು ಬಿದ್ದ ಪೊಲೀಸರಿಗೆ ಬೆಂಗಳೂರಿನಲ್ಲಿ ಇದೇ ರೀತಿಯ ಪ್ರಕರಣವೊಂದು ನಡೆದಿರುವ ಬಗ್ಗೆ ಮಾಹಿತಿ ಲಭಿಸುತ್ತದೆ.
ಪೊಲೀಸರು ಹುಡುಕಾಟ ನಡೆಸಿ ನೋಡಿದಾಗ ಈತ ಓರ್ವ ಹಳೆಯ ವಂಚಕ ಎಂಬುದು ಖಚಿತಗೊಂಡು ಛತ್ತಿಸ್ಗಢ, ಕುಶಾಲನಗರ ವ್ಯಾಪ್ತಿಯಲ್ಲಿ ಕೂಡ ಈತನ ಬಗ್ಗೆ ದಾಖಲಾಗಿರುವ ಪ್ರಕರಣದ ಬೆನ್ನು ಹತ್ತಿ ರಾಹುಲ್ ಪೀಟರ್ ನಾಮಧೇಯದ ಮಹಾವಂಚಕನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸುತ್ತಾರೆ.
೨೦೧೯ರಲ್ಲಿ ಮತ್ತೆ ಮಂಗಳೂರಿನ ಲಾಡ್ಜ್ ಒಂದರಲ್ಲಿ ಅಂದಿನ ಪೊಲೀಸ್ ಅಧಿಕಾರಿ ಒಬ್ಬರಿಗೆ ಕೇಂದ್ರ ತನಿಖಾ ದಳದ ಹಿರಿಯ ಅಧಿಕಾರಿಯೊಬ್ಬರು ತಂಗಿರುವ ಮಾಹಿತಿ ಬಂದು ಅನುಮಾನದೊಂದಿಗೆ ಸ್ಥಳಕ್ಕೆ ಹೋದಾಗ ಇದೇ ರಾಹುಲ್ ಪೀಟರ್ ಇನ್ನೊಂದು ಹೆಸರಿನಲ್ಲಿ ತನ್ನ ಸಹಚರೊಂದಿಗೆ ಇರುವುದು ಗೋಚರಿಸಿದೆ. ಅವರ ಬಳಿ ರಿವಾಲ್ವರ್‌ಗಳು ಇದ್ದವು.
ದಾಳಿ ನಡೆಸಿ ತಂಡವನ್ನು ತಕ್ಷಣ ವಶಕ್ಕೆ ಪಡೆದ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಹುಲ್ ಪೀಟರ್ ಅಲಿಯಾಸ್ ಆಂಟನಿ ಮತ್ತು ಆತನ ಸಹಚರರನ್ನು ಬಂಧಿಸುತ್ತಾರೆ.
ಒAದು ರಿವಾಲ್ವರ್, ಒಂದು ಪಿಸ್ತೂಲ್ ಮತ್ತು ನಕಲಿ ಗುರುತಿನ ಚೀಟಿಗಳು ನಗದು ಸೇರಿದಂತೆ ಹಲವು ವಾಹನಗಳನ್ನು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಸುಮಾರು ೧೫.೭ ಲಕ್ಷದ ಆಸ್ತಿಯ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ.
ನಂತರ ಇವರ ಮೇಲೆ ಕ್ರಿಮಿನಲ್ ಪಿತೂರಿ ಶಸ್ತಾçಸ್ತç ಕಾಯಿದೆ ಉಲ್ಲಂಘನೆ ರಾಜ್ಯ ಲಾಂಛನದ ದುರುಪಯೋಗ ಆರೋಪಗಳನ್ನು ಹೊರಿಸಲಾಗುತ್ತದೆ.
ಹಲವು ರಾಜ್ಯಗಳಿಗೆ ಬೇಕಾಗಿದ್ದ ವ್ಯಕ್ತಿಯನ್ನು ಬಂದಿಸಿರುವುದಾಗಿ ಮಾಹಿತಿ ಹೊರ ಬಿದ್ದ ಬೆನ್ನಲ್ಲೇ, ೨೦೦೭ರಲ್ಲಿ ಆತನ ವಿರುದ್ಧ ಇಂಟರ್ಪೊಲ್ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭಿಸುತ್ತದೆ.
ಈಶಾನ್ಯ ರಾಜ್ಯಗಳಲ್ಲಿ ಈ ರಾಹುಲ್ ಪೀಟರ್‌ಗೆ ಅಪಾರ ಸಂಪರ್ಕಗಳಿದ್ದು ಇದು ಆತನಿಗೆ ಸುರಕ್ಷಿತ ಠಾಣವಾಗಿತ್ತು. ತನ್ನ ಡಿಜಿಟಲ್ ಅಥವಾ ಆರ್ಥಿಕ ಗುರುತುಗಳು ಎಲ್ಲಿಯೂ ಸಿಗದಂತೆ ಆತ ಎಚ್ಚರ ವಹಿಸುತ್ತಿದ್ದ ಎನ್ನುವುದು ಪೊಲೀಸರ ಅಭಿಪ್ರಾಯ.
ಆತ ಎಂದಿಗೂ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಂಡಿರಲಿಲ್ಲ.
ಆ ಮೂಲಕ ಯಾವುದೇ ಹಣಕಾಸು ನಡೆಸುತ್ತಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ.
೨೦೧೯ ರಲ್ಲಿ ಮಂಗಳೂರು ಪ್ರಕರಣದ ಸಂಬAಧ ಜೈಲು ಪಾಲಾಗಿದ್ದ ಮಹಾ ವಂಚಕ ರಾಹುಲ್ ಪೀಟರ್ ೨೦೨೩ರಲ್ಲಿ ಜಾಮೀನಿನ ಮೇಲೆ ಹೊರಗೆ ಬರುತ್ತಾನೆ. ಆದರೆ ಸಮಯವನ್ನು ಎಲ್ಲಿಯೂ ವ್ಯರ್ಥ ಮಾಡದೆ ಆತ ತನ್ನ ಕಾಯಕವನ್ನು ಮುಂದುವರಿಸುತ್ತಾನೆ.
ಮೂರು ತಿಂಗಳ ಹಿಂದೆ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲನೆ ಮಾಡುತ್ತಿದ್ದ ಸಂದರ್ಭ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಈ ಮಹಾ ವಂಚಕನ ಫೈಲ್ ಕಂಡಿದೆ. ಹೇಗಾದರೂ ಆತನನ್ನು ಪತ್ತೆ ಹಚ್ಚಿ ಬಂಧಿಸಲೇಬೇಕೆAದು ಪಣತೊಟ್ಟ ಪೊಲೀಸ್ ಅಧಿಕಾರಿಗಳು ಮತ್ತು ತಂಡ ಆತನ ಸುಳಿವು ಪತ್ತೆಹಚ್ಚಲು ಮಂಗಳೂರು ಸಿಸಿಬಿ ಅಡಿಯಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸುತ್ತಾರೆ.
ಯಾವುದೇ ನಿಖರ ಸುಳಿವು ಇಲ್ಲದಿದ್ದರೂ ಆತ ಕೇರಳದವನು ಮತ್ತು ತನ್ನ ಹೆಚ್ಚಿನ ಸಮಯವನ್ನು ತಮಿಳುನಾಡಿನ ಚೆನ್ನೈನಲ್ಲಿ ಕಳೆಯುತ್ತಾನೆ ಎಂಬುದು ಮಾತ್ರ ಪೊಲೀಸರಿಗೆ ಮಾಹಿತಿ ಸಿಗುತ್ತದೆ.
ಎರಡು ರಾಜ್ಯಗಳಲ್ಲಿ ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ ಮಂಗಳೂರು ಸಿಸಿಬಿ ತಂಡ ಆತನ ಸಹಚರರನ್ನು ಸಂಪರ್ಕಿಸುವ ಮೂಲಕ ಕಾರ್ಯಾಚರಣೆ ನಡೆಸುತ್ತಾರೆ. ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಕೆ.ಎಂ. ರಫೀಕ್ ಮತ್ತು ತಂಡ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗುತ್ತದೆ.
ದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ಮಂಗಳೂರು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು ಈತನ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ ಮಂಗಳೂರು ಈಸ್ಟ್ ಪೊಲೀಸ್ ಠಾಣೆ ೦೮೨೪೨೨೨೦೫೨೦ ಅಥವಾ ಪೊಲೀಸ್ ಇನ್ಸ್ಪೆಕ್ಟರ್ ೯೪೮೦೮೦೫೩೪೭ ಸಂಪರ್ಕಿಸುವAತೆ ಕೋರಿದ್ದಾರೆ.